ಜಿಲ್ಲೆ

ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹ

ರಮೇಶ ಜಹಗೀರದಾರ್

ಜಿಲ್ಲಾಡಳಿತ ಕೂಡಲೇ ಭತ್ತ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭಿಸಬೇಕು. ಖರೀದಿ ಕೇಂದ್ರ ತೆರೆಯಬೇಕು ಎಂದು ಜಿಲ್ಲಾ ರೈತರ ಒಕ್ಕೂಟದ ಮುಖಂಡ ಬಿ.ಎಂ. ಸತೀಶ್ ಆಗ್ರಹಿಸಿದರು.  ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಭತ್ತದ ಕಟಾವು ಆರಂಭವಾಗಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಭತ್ತದ ದರ 1900 ರಿಂದ 1950 ರೂ. ವರೆಗೆ ಇದೆ. ಬೆಲೆ ಕುಸಿತದಿಂದ ರೈತರಿಗೆ ಅನ್ಯಾಯ ಆಗುತ್ತಿದೆ. ಜಿಲ್ಲಾಡಳಿತ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೂಡಲೇ ಭತ್ತದ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದರು.  ಈಗಾಗಲೇ ಕ್ವಿಂಟಾಲ್ ಭತ್ತಕ್ಕೆ 2320 ರೂ. ನಿಗದಿಪಡಿಸಿದೆ. ರಾಜ್ಯ ಸರ್ಕಾರ 500 ರೂ. ಪ್ರೋತ್ಸಾಹಧನ ಮಂಜೂರು ಮಾಡಿ 2820 ರೂ. ದರದಲ್ಲಿ ಖರೀದಿ ಮಾಡಬೇಕು ಎಂದು ಹೇಳಿದರು.  ಮಾಜಿ ಶಾಸಕ ಎಂ. ಬಸವರಾಜನಾಯ್ಕ ಮಾತನಾಡಿ, ಕಳೆದ ವಾರದಲ್ಲಿ ಸುರಿದ ಮಳೆಯಿಂದ ಬಾಳೆ, ಪಪ್ಪಾಯಿ ಎಲ್ಲವೂ ಹಾಳಾಗಿದೆ. ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲವಾಗಿದೆ. ರೈತರ ಪರಿಸ್ಥಿತಿ ತುಂಬಾ ಸಂಕಷ್ಟದಲ್ಲಿದೆ. ಹಾಗಾಗಿ ರಾಜ್ಯ ಸರ್ಕಾರವೇ ಮಳಿಗೆಗಳನ್ನು ಆರಂಭಿಸಿ ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.  ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ನಾಗೇಶ್ವರರಾವ್ ಮಾತನಾಡಿ, ಭತ್ತದ ಬೆಲೆ ಕುಸಿತದಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಭತ್ತದ ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸುವ ಜತೆಗೆ ಮುಂದಿನ ಹೋರಾಟದ ಬಗ್ಗೆ ಮೇ 3 ರಂದು ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ನಡೆಸಿ, ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.  ಮಾಜಿ ಮೇಯರ್ ಎಚ್.ಎನ್. ಗುರುನಾಥ್, ಕುಂದುವಾಡ ಗಣೇಶಪ್ಪ, ಅಣಬೇರು ಕುಮಾರಪ್ಪ, ಬಾತಿ ಬಿ.ಕೆ. ಶಿವಕುಮಾರ್, ಕುಂದುವಾಡ ಮಹೇಶ್ವರಪ್ಪ, ಆವರಗೆರೆ ಅಜ್ಜನಗೌಡ್ರು, ಗೋಣಿವಾಡ ಮಂಜುನಾಥ್, ಪುನೀತ್, ಜಿಮ್ಮಿ ಹನುಮಂತಪ್ಪ, ಗೋಶಾಲೆ ಸುರೇಶ್ ಇದ್ದರು.