ಜಿಲ್ಲೆ

ಪಾದಯಾತ್ರೆಯಿಂದ ಅಂತರಂಗದ ದರ್ಶನ

ರಮೇಶ ಜಹಗೀರದಾರ್

ದಾವಣಗೆರೆ :  ಪಾದಯಾತ್ರೆಯು ಪ್ರದರ್ಶನವಾಗದೇ ಅಂತರಂಗದ ದರ್ಶನ ಆಗಬೇಕು, ಅದರಿಂದ ವ್ಯಕ್ತಿತ್ವ ವಿಕಾಸವಾಗಬೇಕು ಎಂದು ವಿರಕ್ತ ಮಠದ ಶ್ರೀ ಡಾ. ಬಸವಪ್ರಭು ಸ್ವಾಮೀಜಿ ಹೇಳಿದರು.  ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ವತಿಯಿಂದ ನಗರದ ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ, 46ನೇ ವರ್ಷದ ಕೊಟ್ಟೂರು ಪಾದಯಾತ್ರಿಗಳಿಗೆ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.  ಪಾದ ಎಂದರೆ ಜ್ಞಾನ ಮತ್ತು ಕ್ರಿಯೆಯ ಸಂಗಮವಾಗಿದೆ. ಜ್ಞಾನವನ್ನು ಸಂಪಾದಿಸುವ ಜತೆಗೆ ಆಚರಣೆಗೆ ತರಬೇಕು. ಇದು ಅರಿವನ್ನು ಅರಳಿಸುವ ಪಾದಯಾತ್ರೆ ಆಗಬೇಕು. ಜೀವನದಲ್ಲಿ ಪರಿವರ್ತನೆ ತರಬೇಕು ಎಂದು ಆಶಯ ವ್ಯಕ್ತಪಡಿಸಿದರು.  ಕೊಟ್ಟೂರು ಗುರು ಬಸವೇಶ್ವರರು ಬಸವ ತತ್ವವನ್ನು ಮನೆ ಮನೆಗೆ ತಲುಪಿಸಿದರು. ಅವರು ಬೇಡಿದವರಿಗೆ ನೀಡುವ ಮಹಾತ್ಮರು. ಕೊಟ್ಟೂರಿನಲ್ಲಿ ಸಮಾನತೆಯ ಆದರ್ಶವನ್ನು ನೋಡಬಹುದು ಎಂದರು.  ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಮಾತನಾಡಿ, ಕೊಟ್ಟೂರು ಪಾದಯಾತ್ರೆ ಆರಂಭವಾದಾಗ ಕೇವಲ 10-15 ಭಕ್ತರು ಇದ್ದರು. ವರ್ಷದಿಂದ ವರ್ಷಕ್ಕೆ ಸಂಖ್ಯೆ ಬೆಳೆಯುತ್ತ ಈಗ ಸಾವಿರಾರು ಭಕ್ತರು ಪಾದಯಾತ್ರೆಗೆ ತೆರಳುತ್ತಾರೆ ಎಂದು ಹೇಳಿದರು.  ಬೇರೆಯವರು ಹೋಗುತ್ತಾರೆ ಎಂಬ ಕಾರಣಕ್ಕೆ ನಾವೂ ಪಾದಯಾತ್ರೆಗೆ ಹೋದರೆ ಅದಕ್ಕೆ ಅರ್ಥವಿಲ್ಲ. ಸಿದ್ಧಾಂತ, ತಾತ್ವಿಕ ನೆಲೆಗಟ್ಟು ಇರಬೇಕು. ಅದು ಜೀವನ ಮುಕ್ತಿಯ ಸಾಧನವಾಗಬೇಕು ಎಂದು ಅಭಿಪ್ರಾಯಪಟ್ಟರು.  ಭಕ್ತರು ಶ್ರದ್ಧಾ ಭಕ್ತಿಯಿಂದ ಪಾದಯಾತ್ರೆಗೆ ತೆರಳಬೇಕು. ಬರಿಗಾಲಿನಲ್ಲ ತೆರಳುವುದರಿಂದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇರಬೇಕು ಎಂದು ತಿಳಿಸಿದರು.  ಅಯ್ಯನಹಳ್ಳಿ ರಂಭಾಪುರಿ ಶಾಖಾ ಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಾದಯಾತ್ರಿಗಳಲ್ಲಿ ಆಡಂಬರದ ಭಕ್ತಿ ಇರಬಾರದು. ಉದ್ದೇಶ, ವಿಚಾರಧಾರೆ ಅಗತ್ಯ. ಪಾದಯಾತ್ರೆಯು ಕೇವಲ ಶೋಕಿಯಾಗದೇ ಶ್ರದ್ಧೆ, ಭಕ್ತಿಯ ಪ್ರತೀಕವಾಗಬೇಕು. ಯುವಜನರು ದುಶ್ಚಟಗಳನ್ನು ತ್ಯಜಿಸುವಂತಾಗಬೇಕು ಎಂದು ಹೇಳಿದರು.  ಕೋಣಂದೂರು ಶಿವಲಿಂಗೇಶ್ವರ ಬೃಹನ್ಮಠದ ಶ್ರೀ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಕನ್ನಡ ಪಂಡಿತ ರುದ್ರಮುನಿ ಸ್ವಾಮಿ, ಪ್ರವಚನಕಾರರಾದ ಮುದಕಯ್ಯ ಸ್ವಾಮಿಗಳು, ಸಿ.ಆರ್. ಜಯರಾಜ್, ರೋಟರಿ ಕ್ಲಬ್‌ನ ಉಳುವಯ್ಯ ಮಾತನಾಡಿದರು.  ಟ್ರಸ್ಟ್‌ನ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ, ಕಾರ್ಯದರ್ಶಿ ಟಿ.ಜೆ. ಬಕ್ಕೇಶಪ್ಪ, ಸಹ ಕಾರ್ಯದರ್ಶಿ ಬಿ. ಚಿದಾನಂದ, ಖಜಾಂಚಿ ಮಲ್ಲಾಬಾದಿ ಗುರುಬಸವರಾಜ, ಅಜ್ಜಂಪುರ ಶೆಟ್ರು ಮೃತ್ಯುಂಜಯ, ಸಿದ್ದೇಶ ಕೋಟೆಹಾಳ್ ಇದ್ದರು.  ...  (ಬಾಕ್ಸ್)  ಕೊಟ್ಟೂರೇಶನ ಧ್ಯಾನ  ನಗರದ ಬಕ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣ ಕೊಟ್ಟೂರು ಪಾದಯಾತ್ರಿಗಳಿಂದ ತುಂಬಿತ್ತು. ಎಲ್ಲೆಲ್ಲೂ ಕೊಟ್ಟೂರೇಶ್ವರನದೇ ಧ್ಯಾನ. ಪಾದಯಾತ್ರಿಗಳಲ್ಲಿ ಭಕ್ತಿ ಮತ್ತು ಉತ್ಸಾಹ ಮೇಳೈಸಿದ್ದವು.  ಪಾದಯಾತ್ರೆಗೆ ಹೊರಟವರಲ್ಲಿ ವಯಸ್ಸಿನ ಭೇದವಿರಲಿಲ್ಲ. ಮಕ್ಕಳು, ಯುವಜನರು, ವೃದ್ಧರು, ಮಹಿಳೆಯರೂ ಇದ್ದರು. ಬಕ್ಕೇಶ್ವರ ಸ್ವಾಮಿಯ ದರ್ಶನ ಪಡೆದು ಹೊರಟರು. ಹೆಗಲಿಗೊಂದು ಚೀಲ ಏರಿಸಿಕೊಂಡು ಬರಿಗಾಲಲ್ಲಿ ಸಾಗಿದರು.  ಮಾರ್ಗದುದ್ದಕ್ಕೂ ಪಾದಯಾತ್ರಿಗಳಿಗಾಗಿ ಅನೇಕ ಭಕ್ತರು ದಾಸೋಹದ ವ್ಯವಸ್ಥೆ ಮಾಡಿದ್ದರು. ಮಜ್ಜಿಗೆ, ತಂಪು ಪಾನೀಯ, ಹಣ್ಣು, ಇಡ್ಲಿ ಇತ್ಯಾದಿ ಪದಾರ್ಥಗಳನ್ನು ನೀಡಿದರು.  ...  (ಕೋಟ್)  ಕೋಡಿ ಕ್ಯಾಂಪ್‌ನಲ್ಲಿ ಕೊಟ್ಟೂರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಮುಗಿಯುತ್ತ ಬಂದಿದೆ. ಮುಂದಿನ ವರ್ಷ ಪಾದಯಾತ್ರಿಗಳು ಅಲ್ಲಿ ತಂಗಲು ಅನುಕೂಲವಾಗಲಿದೆ.   ಡಾ. ಅಥಣಿ ಎಸ್. ವೀರಣ್ಣ, ಪಾದಯಾತ್ರೆ ಟ್ರಸ್ಟ್ ಗೌರವಾಧ್ಯಕ್ಷ  ...