ಜಿಲ್ಲೆ

ಪದಗಳ ಬಂಡಿಯಲಿ ದೇಶಾಭಿಮಾನದ ಬಂಧ

ರಮೇಶ ಜಹಗೀರದಾರ್

ದಾವಣಗೆರೆ: ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ವತಿಯಿಂದ, ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಎ.ಕೆ. ಫೌಂಡೇಶನ್ ಸಹಯೋಗದಲ್ಲಿ ಸ್ವಾತಂತ್ರೊೃೀತ್ಸವದ ಪ್ರಯುಕ್ತ ನಗರದ ಎಂ.ಎಸ್.ಬಿ. ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಜಿಲ್ಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಪದಬಂಧ ಬಿಡಿಸುವ ಮೂಲಕ ನಾಡು, ನುಡಿ, ಸ್ವಾತಂತ್ರೃ ಚಳವಳಿಯ ಕುರಿತಾದ ತಮ್ಮ ಜ್ಞಾನವನ್ನು ಒರೆಗೆ ಹಚ್ಚಿದರು.
 ವಿವಿಧ ಕಾಲೇಜುಗಳಿಂದ ಬಂದಿದ್ದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಆಸಕ್ತಿಯಿಂದ ಕುಳಿತು ತಮ್ಮ ಶಬ್ದ ಭಂಡಾರವನ್ನು ವಿಸ್ತರಿಸಿಕೊಳ್ಳುವ ಪ್ರಯತ್ನ ಮಾಡಿದರು. ಪಠ್ಯಕ್ರಮಕ್ಕೆ ಹೊರತಾಗಿದ್ದ ಪ್ರಶ್ನೆಗಳಿಗೂ ಉತ್ತರ ಹುಡುಕಿದರು. ಈ ಸ್ಪರ್ಧೆಯು ಯುವಜನರ ಅಧ್ಯಯನಶೀಲತೆ, ಸಾಮಾನ್ಯ ಜ್ಞಾನಕ್ಕೆ ಕನ್ನಡಿ ಹಿಡಿಯಿತು.
 ಕೆಲವರು ಮುಂಚಿತವಾಗಿಯೇ ನೋಂದಣಿ ಮಾಡಿಸಿದ್ದರು. ಮತ್ತೆ ಕೆಲವರು ಸ್ಥಳದಲ್ಲೇ ಹೆಸರು ಬರೆಸಿದರು. ಸ್ಪರ್ಧೆಯು ನಿಗದಿತ ಸಮಯಕ್ಕೆ ಸರಿಯಾಗಿ ಆರಂಭವಾಯಿತು. ಅರ್ಧ ಗಂಟೆಯ ಅವಧಿಯಲ್ಲಿ ಪದಬಂಧವನ್ನು ಪೂರ್ಣಗೊಳಿಸಬೇಕಿತ್ತು. ವಿದ್ಯಾರ್ಥಿಗಳು ತಮಗೆ ತಿಳಿದಷ್ಟು ವಿಷಯವನ್ನು ಪ್ರಾಮಾಣಿಕವಾಗಿ ದಾಖಲಿಸಿದರು. 15 ವಿಜೇತರನ್ನು ಆಯ್ಕೆ ಮಾಡಿ ತಲಾ 1 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಯಿತು.
 ಎಂ.ಎಸ್.ಬಿ. ಕಾಲೇಜಿನ ಅಧ್ಯಾಪಕರು ಸ್ಪರ್ಧೆಯ ಆಯೋಜನೆಯಲ್ಲಿ ಕೈಜೋಡಿಸಿದರು. ಒಟ್ಟಿನಲ್ಲಿ ಸ್ವಾತಂತ್ರೊೃೀತ್ಸವದ ಮುನ್ನಾದಿನ ವಿಜಯವಾಣಿಯ ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
 ...
 ಕನ್ನಡ ಪತ್ರಿಕೆಗಳು ಹೆಚ್ಚು ಸಮಾಜಮುಖಿಯಾಗಲಿ
 ಕನ್ನಡ ಪತ್ರಿಕೆಗಳು ಹೆಚ್ಚು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಹೇಳಿದರು.
 ಪದಬಂಧ ಸ್ಪರ್ಧೆಯ ನಂತರ ನಡೆದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಿಂದಲೇ ನಾವೆಲ್ಲ ಬಂದಿದ್ದು ಆ ಋಣವನ್ನು ತೀರಿಸಬೇಕು. ಶಿಕ್ಷಣಕ್ಕೆ ಸಂಬಂಧಿಸಿದ ಲೇಖನಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ತಿಳಿಸಿದರು.
 ಈ ಹಿಂದೆ ಮೊಳೆಗಳನ್ನು ಜೋಡಿಸಿ ಪತ್ರಿಕೆಯನ್ನು ಮುದ್ರಿಸಲಾಗುತ್ತಿತ್ತು. ಈಗ ತಂತ್ರಜ್ಞಾನದ ಬೆಳವಣಿಗೆಯಿಂದ ಮುದ್ರಣ ಮಾಧ್ಯಮದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಪದಬಂಧಕ್ಕೆ ಹಲವು ವರ್ಷಗಳ ಇತಿಹಾಸವೇ ಇದೆ. ಕನ್ನಡ ಭಾಷೆಯ ಮೇಲೆ ಪ್ರಭುತ್ವ ಸಾಧಿಸಲು ಇಂಥ ಸ್ಪರ್ಧೆಗಳು ಸಹಾಯಕವಾಗುತ್ತವೆ. ವಿದ್ಯಾರ್ಥಿಗಳು ಹೆಚ್ಚು ಪಾಲ್ಗೊಳ್ಳಬೇಕು. ವಿಜಯವಾಣಿಯ ಈ ಪ್ರಯತ್ನ ಸಂತೋಷ ತಂದಿದೆ ಎಂದರು.
 ಎಂ.ಎಸ್.ಬಿ. ಕಾಲೇಜಿನ ಪ್ರಾಚಾರ್ಯೆ ಪ್ರೊ.ಜಿ.ಸಿ. ನೀಲಾಂಬಿಕಾ, ಎವಿಕೆ ಕಾಲೇಜು ಪ್ರಾಚಾರ್ಯೆ ಕಮಲಾ ಸೊಪ್ಪಿನ್ ಭಾಗವಹಿಸಿದ್ದರು. ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್ ಪ್ರಾಸ್ತಾವಿಕ ಮಾತನಾಡಿದರು.
 ವಿಶೇಷ ವರದಿಗಾರ ರಮೇಶ ಜಹಗೀರದಾರ್ ಸ್ವಾಗತಿಸಿದರು. ವಿಜಯವಾಣಿ ಚಿತ್ರದುರ್ಗ ಆವೃತ್ತಿಯ ಜಾಹೀರಾತು ವ್ಯವಸ್ಥಾಪಕ ಎಂ.ಎಸ್. ಕುಮಾರಸ್ವಾಮಿ ಬಹುಮಾನ ವಿತರಣೆಯ ನಿರ್ವಹಣೆ ಮಾಡಿದರು. ಹಿರಿಯ ವರದಿಗಾರ ಡಿ.ಎಂ. ಮಹೇಶ್ ವಂದಿಸಿದರು. ಕನ್ನಡ ಪ್ರಾಧ್ಯಾಪಕ ಮಂಜಪ್ಪ ನಿರೂಪಿಸಿದರು.
 ಎಂ.ಎಸ್.ಬಿ. ಕಾಲೇಜಿನ ಕೆ. ಪವಿತ್ರಾ, ಲತಾ ಎಸ್. ಕಂಬಳಿಮಠ, ಅನಿತಾ, ಪ್ರಶಾಂತ್ ಕಕ್ಕರಗೊಳ್ಳ, ಎಂ.ಎಸ್. ಸುಜಾತ, ಎಚ್.ಎಂ. ಪ್ರಮಿಳಾ, ಎಂ.ಟಿ. ನಾಗರತ್ನ, ಕೆ.ಆರ್. ಸತೀಶ ಅವರು ಪದಬಂಧ ಮೌಲ್ಯಮಾಪನ ಮಾಡಿದರು.
 ...
 
 (ಬಾಕ್ಸ್)
 ಬೆಳೆಯಲಿ ನಾಡು, ನುಡಿಯ ಅಭಿಮಾನ
 ಯುವಜನರು ಪ್ರಕೃತಿ ನೀಡಿದ ವರ. ಅವರು ನಮ್ಮ ನಾಡು, ನುಡಿಯ ಬಗ್ಗೆ ಅಭಿಮಾನ, ಗೌರವ ಬೆಳೆಸಿಕೊಳ್ಳಬೇಕು, ಸಮರ್ಪಣಾ ಮನೋಭಾವದಿಂದ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿದ ಎ.ಕೆ. ಫೌಂಡೇಷನ್‌ನ ಸಂಸ್ಥಾಪಕ ಕೆ.ಬಿ. ಕೊಟ್ರೇಶ್ ಹೇಳಿದರು.
 ಕನ್ನಡ ನಾಡಿಗೆ ಕವಿಗಳು, ವಚನಕಾರರ ಕೊಡುಗೆ ಅಪಾರವಾಗಿದ್ದು ಯುವಜನರಿಗೆ ಇದರ ಅರಿವಿರಬೇಕು. ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ, ಲಾಲ್ ಬಹದ್ದೂರ್ ಶಾಸ್ತ್ರಿ, ಭಗತ್‌ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್ ಮುಂತಾದವರ ಹೋರಾಟದ ಫಲವಾಗಿ ನಾವು ಸ್ವಾತಂತ್ರೃ ಪಡೆದಿದ್ದೇವೆ. ಅದನ್ನು ಉಳಿಸಿಕೊಂಡು ಭವ್ಯ ಭಾರತವನ್ನು ಕಟ್ಟೋಣ ಎಂದು ತಿಳಿಸಿದರು.
 ಇದೇ ವೇಳೆ ಅವರು ನಾಡು, ನುಡಿಯ ಬಗ್ಗೆ ಸ್ವರಚಿತ ಕವನ ವಾಚಿಸಿದರು.
 ...
 (ಬಾಕ್ಸ್)
 ತ್ರಿವರ್ಣ ಧ್ವಜಗಳ ರಂಗು
 ಕೆ.ಬಿ. ಕೊಟ್ರೇಶ್ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಸ್ವಾತಂತ್ರೊೃೀತ್ಸವ ಹಿನ್ನೆಲೆಯಲ್ಲಿ ತ್ರಿವರ್ಣ ಧ್ವಜಗಳನ್ನು ವಿತರಿಸಿದ್ದು ವಿಶೇಷವಾಗಿತ್ತು.
 ಸಭಾಂಗಣದಲ್ಲಿ ಸೇರಿದ್ದ ವಿದ್ಯಾರ್ಥಿಗಳು ಎದ್ದು ನಿಂತು ಗೌರವದಿಂದ ಧ್ವಜಗಳನ್ನು ಸ್ವೀಕರಿಸಿ, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು. ಇದೇ ವೇಳೆ ರಾಷ್ಟ್ರ ಧ್ವಜದ ಮಹತ್ವ, ವಿಶೇಷತೆಯ ಬಗ್ಗೆ ಮಾಹಿತಿ ನೀಡಲಾಯಿತು. ಎಲ್ಲರೂ ತ್ರಿವರ್ಣ ಧ್ವಜ ಹಿಡಿದು ನಿಂತಿದ್ದ ದೃಶ್ಯ ದೇಶಭಕ್ತಿ ಉಕ್ಕಿಸುವಂತಿತ್ತು.
 ...
 
 (ಕೋಟ್)
 ಪದಬಂಧ ಸ್ಪರ್ಧೆಗಳು ಮಕ್ಕಳ ಭಾಷಾ ಪ್ರೌಢಿಮೆ ಹೆಚ್ಚಿಸಿ ಮನೋವಿಕಾಸಕ್ಕೆ ಕಾರಣವಾಗುತ್ತವೆ. ಜ್ಞಾಪಕ ಶಕ್ತಿಯನ್ನು ಸುಧಾರಿಸಿ ಶಬ್ದ ಭಂಡಾರವನ್ನು ಜಾಸ್ತಿ ಮಾಡುತ್ತವೆ. ಜತೆಗೆ ಮಿದುಳಿಗೆ ವ್ಯಾಯಾಮವೂ ಆಗುತ್ತದೆ, ಲವಲವಿಕೆ ಮೂಡುತ್ತದೆ. ವಿಷಯದ ಜ್ಞಾನವೂ ವೃದ್ಧಿಯಾಗುತ್ತದೆ. ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು ಕರೆಸಿ ಇಂಥ ಸ್ಪರ್ಧೆ ಆಯೋಜಿಸುವುದು ಸುಲಭವಲ್ಲ, ಇದನ್ನು ವಿಜಯವಾಣಿ ಪತ್ರಿಕೆ ಯಶಸ್ವಿಯಾಗಿ ಮಾಡಿದೆ. ಇದೊಂದು ವಿಭಿನ್ನ ಪ್ರಯತ್ನವಾಗಿದೆ. ಇದೇ ರೀತಿಯಾಗಿ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ರೀತಿಯ ಸ್ಪರ್ಧೆಗಳು ನಡೆದರೆ ಉತ್ತಮ.
  ಪ್ರೊ.ಜಿ.ಸಿ. ನೀಲಾಂಬಿಕಾ, ಎಂ.ಎಸ್.ಬಿ. ಕಾಲೇಜಿನ ಪ್ರಾಚಾರ್ಯೆ
 ...
 
 (ಕೋಟ್)
 ಮಕ್ಕಳು ಇಂಗ್ಲಿಷ್‌ನತ್ತ ವಾಲುತ್ತಿರುವ ಈ ದಿನಗಳಲ್ಲಿ ಪದಬಂಧ ಸ್ಪರ್ಧೆಯಿಂದ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಸೃಜನಶೀಲತೆ ಬೆಳೆಸಲು ಸಾಧ್ಯವಾಗುತ್ತದೆ. ಹೊಸ ಪದಗಳ ಪರಿಚಯವಾಗುತ್ತದೆ. ಭಾಷಾ ಕಲಿಕೆಯಲ್ಲಿ ಉತ್ಸಾಹ ಮೂಡುತ್ತದೆ. ಸ್ವಾತಂತ್ರೃ ಚಳವಳಿಯ ಬಗ್ಗೆ ಅರಿವು ಮೂಡುತ್ತದೆ, ಅದರಿಂದ ದೇಶಾಭಿಮಾನ ಜಾಗೃತವಾಗುತ್ತದೆ. ಇದು ಕನ್ನಡ ಭಾಷಾ ಜ್ಞಾನವನ್ನು ವಿಸ್ತರಿಸುವ ಕೆಲಸವಾಗಿದ್ದು ವ್ಯಕ್ತಿತ್ವ ವಿಕಾಸಕ್ಕೂ ದಾರಿ ಮಾಡಿಕೊಡುತ್ತದೆ. ಮುಂಬರುವ ದಿನಗಳಲ್ಲಿ ಇತಿಹಾಸ, ಪುರಾಣ, ವಿಜ್ಞಾನ, ಪರಿಸರ ಇನ್ನಿತರ ವಿಷಯಗಳನ್ನು ಆಧರಿಸಿ ಪದಬಂಧ ಸ್ಪರ್ಧೆಗಳನ್ನು ವಿಜಯವಾಣಿ ಆಯೋಜಿಸಲಿ.
  ಕಮಲಾ ಸೊಪ್ಪಿನ್, ಎವಿಕೆ ಕಾಲೇಜು ಪ್ರಾಚಾರ್ಯೆ
 ...