ಜಿಲ್ಲೆ

ಸರ್ವರಿಗೂ ಸಮಾನತೆ ಕಲ್ಪಿಸಿದ ಸಂವಿಧಾನ

ರಮೇಶ ಜಹಗೀರದಾರ್

ನ್ಯಾಮತಿ :  ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವು ವಿಶ್ವಕ್ಕೆ ಶ್ರೇಷ್ಠವಾಗಿದೆ ಎಂದು ತಹಸೀಲ್ದಾರ್ ಎಚ್.ಬಿ.ಗೋವಿಂದಪ್ಪ ಹೇಳಿದರು.  ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತದಿಂದ ಆಯೋಜಿಸಿದ್ದ ಸಂವಿಧಾನ ಸಮರ್ಪಣ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.  ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ, ಸರ್ವರಿಗೂ ಸಮಾನತೆ ಕಲ್ಪಿಸಿದೆ. ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ದೇಶವನ್ನಾಗಿ ಸಂವಿಧಾನದಲ್ಲಿ ಘೋಷಿಸಲಾಗಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರೃವಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನಾಗರಿಕರೆಲ್ಲ ಚಿರಋಣಿಯಾಗಿ ಇರಬೇಕು ಎಂದು ತಿಳಿಸಿದರು.  ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಎಚ್.ಬಿ.ಗೋವಿಂದಪ್ಪ ಸಂವಿಧಾನ ಪೀಠಿಕೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಉಪ ತಹಸೀಲ್ದಾರ್ ಎಂ.ಸಿ. ನಂದ್ಯಪ್ಪ, ಶಿರಸ್ತೇದಾರ್ ಕೆಂಚಮ್ಮ , ಉಪನ್ಯಾಸಕ ಗಂಗಾಧರ್ ನವುಲೇ, ಹಿರಿಯ ಪತ್ರಕರ್ತ ಸದಾಶಿವಯ್ಯ ಹಿರೇಮಠ್, ಕಾನಿಪಸ ತಾಲೂಕು ಸಂಚಾಲಕ ಎಂ.ಎಸ್.ಶಾಸ್ತ್ರೀ ಹೊಳೆಮಠ್, ಸಿಬ್ಬಂದಿ ಹರೀಶ್, ರಮೇಶ್, ಧನಸ್ಸು, ಮೇಘರಾಜ್, ನವೀನ್, ಲೀಲಾವತಿ, ಅನುಷಾ, ಗೀರೀಶ್ ಕುಮಾರ್, ಮಂಜು ಇದ್ದರು.