ದಾವಣಗೆರೆ : ಬರಲಿರುವ ಜಾತಿ ಗಣತಿಯಲ್ಲಿ ಎಲ್ಲ ಒಳ ಪಂಗಡಗಳು ವೀರಶೈವ ಲಿಂಗಾಯತ ಎಂದು ಬರೆಸಬೇಕು. ಆ ಮೂಲಕ ಸಮಾಜದ ಸಮಗ್ರತೆ ಮತ್ತು ಒಗ್ಗಟ್ಟನ್ನು ಪ್ರತಿಪಾದಿಸಬೇಕು ಎಂಬುದು ಸೇರಿದಂತೆ 12 ನಿರ್ಣಯಗಳನ್ನು ದಾವಣಗೆರೆಯಲ್ಲಿ ನಡೆದ ವೀರಶೈವ ಪೀಠಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು. ಸಮ್ಮೇಳನದ ಕೊನೆಯ ದಿನವಾದ ಮಂಗಳವಾರ, ನಗರದ ಶ್ರೀಮದ್ ಅಭಿನವ ರೇಣುಕ ಮಂದಿರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದರು ನಿರ್ಣಯಗಳನ್ನು ಪ್ರಕಟಿಸಿದರು. ಒಳಪಂಗಡ ಭೇದ ಮರೆತು ಎಲ್ಲರೂ ಒಂದಾಗಬೇಕು ಎಂಬ ಸಂದೇಶ ಶೃಂಗ ಸಮ್ಮೇಳನಲ್ಲಿ ಮೂಡಿಬಂದ ಹಿನ್ನೆಲೆಯಲ್ಲಿ ಈ ನಿರ್ಣಯ ಮಹತ್ವ ಪಡೆದುಕೊಂಡಿದೆ. ಸನಾತನ ಹಿಂದು ವೀರಶೈವ ಲಿಂಗಾಯತ ಧರ್ಮದ ಅನುಯಾಯಿಗಳು ತಾವು ಮಾಡುವ ಉದ್ಯೋಗಗಳಿಂದಲೇ ಉಪಜಾತಿಗಳು ನಿರ್ಮಾಣವಾಗಿವೆ. ಅವುಗಳಿಂದ ಧರ್ಮವು ಹರಿದು ಹಂಚಿ ಹೋಗಬಾರದು. ಉಪಜಾತಿ ಯಾವುದೇ ಇದ್ದರೂ ನಾವೆಲ ್ಲವೀರಶೈವ ಲಿಂಗಾಯತರೆಂಬ ಒಗ್ಗಟ್ಟನ್ನು ಕಾಪಾಡಿಕೊಂಡು ಹೋಗಬೇಕು ಎಂಬ ಸಂದೇಶ ನೀಡಲಾಯಿತು. ...