ದಾವಣಗೆರೆ : ದಿನಪತ್ರಿಕೆಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಅನೇಕ ಮಾಹಿತಿಗಳು ತಿಳಿಯುತ್ತವೆ. ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ‘ವಿಜಯವಾಣಿ’ ಮಹಿಳೆಯರಿಗೆ ಓದಲು ಪ್ರೋತ್ಸಾಹ ನೀಡುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಹೇಳಿದರು. ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿಯಿಂದ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಲು ಮಂಗಳವಾರ ಪತ್ರಿಕೆಯ ಕಚೇರಿಯಲ್ಲಿ ನಡೆದ ಲಕ್ಕಿ ಡಿಪ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಮೊಬೈಲ್ ಫೋನ್ ಬಳಕೆ ಹೆಚ್ಚಾಗಿದ್ದು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವುದು ಜಾಸ್ತಿಯಾಗಿದೆ. ಇಂಥ ಸನ್ನಿವೇಶದಲ್ಲಿ ಪತ್ರಿಕೆಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಾನು ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗ ದಿನಪತ್ರಿಕೆಗಳನ್ನು ಹೆಚ್ಚಾಗಿ ಓದುತ್ತಿದ್ದೆ. ಅದರಿಂದ ಬಹಳ ಅನುಕೂಲವಾಯಿತು. ಪತ್ರಿಕೆಗಳಲ್ಲಿ ಬರುವ ಮಾಹಿತಿಗಳಿಂದ ಸಮಕಾಲೀನ ವಿಷಯಗಳ ಬಗ್ಗೆ ನಮ್ಮ ತಿಳಿವಳಿಕೆ ಹೆಚ್ಚಾಗುತ್ತದೆ. ಆದ್ದರಿಂದ ವಾಚನಾಭಿರುಚಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು ಓದಿದಾಗ ವಾಕ್ಯ ರಚನೆ ಹೇಗೆ ಮಾಡಬೇಕು ಎಂಬುದು ಅರಿವಿಗೆ ಬರುತ್ತದೆ. ಶಬ್ದಗಳ ಬಳಕೆಯ ಬಗ್ಗೆ ತಿಳಿಯುತ್ತದೆ. ಪತ್ರಿಕೆಗಳು ಪ್ರಜಾಪ್ರಭುತ್ವದ 4ನೇ ಅಂಗವಾಗಿದ್ದು ಅವುಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆಯ ವಿಶೇಷ ವರದಿಗಾರ ರಮೇಶ ಜಹಗೀರದಾರ್ ಸ್ವಾಗತಿಸಿದರು. ಮುಖ್ಯ ಉಪ ಸಂಪಾದಕ ಹರ್ಷ ಪುರೋಹಿತ್, ಜಾಹೀರಾತು ವಿಭಾಗದ ಮುಖ್ಯಸ್ಥ ಕುಮಾರಸ್ವಾಮಿ ಲಕ್ಕಿ ಡಿಪ್ ನಿರ್ವಹಣೆ ಮಾಡಿದರು. ಸೀನಿಯರ್ ಆಫೀಸರ್ ಶಶಿಧರ ಮೂರ್ತಿ, ಹಿರಿಯ ವರದಿಗಾರ ಡಿ.ಎಂ. ಮಹೇಶ್, ಪ್ರಸಾರಾಂಗ ವಿಭಾಗದ ಶುಭಕರ್ ಇನ್ನಿತರ ಸಹೋದ್ಯೋಗಿಗಳು ಇದ್ದರು. ...