ದಾವಣಗೆರೆ : ರಾಜ್ಯಮಟ್ಟದ ಯುವಜನೋತ್ಸವ ಅಂಗವಾಗಿ ನಗರದ ಬಾಪೂಜಿ ಎಂ.ಬಿ.ಎ ಮೈದಾನದಲ್ಲಿ ಭಾನುವಾರ ಸಂಜೆ ಆಯೋಜಿಸಲಾದ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮ್ಯೂಜಿಕಲ್ ನೈಟ್ಸ್‌ಗೆ ಬೆಣ್ಣೆನಗರಿ ಜನ ಕುಣಿದು ಕುಪ್ಪಳಿಸಿದರು. ಬಾಲಿವುಡ್ ಗಾಯಕಿ ಹಂಸಿಕಾ ನಾಯರ್ ‘ಚಮಕ್ ಚಲ್ಲೋ’ ಗೀತೆ ಹಾಡಿ ಚಳಿಯಲ್ಲೂ ಕಿಚ್ಚು ಹಚ್ಚಿದರು.
ಸಂಗೀತ ಸಂಜೆ ಕಾರ್ಯಕ್ರಮವನ್ನು ಶ್ರೇಯಾ ಗೋಷಾಲ್ ಕಂಠಸಿರಿಯಲ್ಲಿ ಮೂಡಿಬಂದ, ಮರಾಠಿಯ ಚಂದಾ ಗೀತೆಯನ್ನು ವಿದ್ಯಾರ್ಥಿಗಳು ಲಾವಣಿ ನೃತ್ಯದೊಂದಿಗೆ ಆರಂಭಿಸಿದರು. ಇದರೊಂದಿಗೆ ಉಪೇಂದ್ರ ಸಿನಿಮಾ ಪ್ರಸಿದ್ಧ ಗೀತೆ ಹಾಗೂ ಅಗ್ನಿಪಥ್ ಚಿತ್ರದ ಗಣೇಶ ಗೀತೆಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿದರು.
ಮಣಿಕಾಂತ್ ಕದ್ರಿ ತಮ್ಮದೇ ಸಂಗೀತ ಸಂಯೋಜನೆಯ ಗೀತೆಗಳನ್ನು ಪ್ರಸ್ತುತಪಡಿಸಿದರು. ಸರಿಗಮ ಖ್ಯಾತಿಯ ಸುಪ್ರೀತ್ ಕನ್ನಡ ಗೀತೆಗಳನ್ನು ಹಾಡಿದರು.
ಹಂಸಿಕಾ ಅಯ್ಯರ್, ನಗರ ಅಧಿದೇವತೆ ದುರ್ಗಾಂಬಾ ದೇವಿಯನ್ನು ಸ್ಮರಿಸುತ್ತಾ, ಆದಿಗುರು ಶಂಕರಾಚಾರ್ಯ ಅವರ ರಚನೆಯ ‘ಐಗಿರಿ ನಂದಿನಿ’ ಗೀತೆ ಪ್ರಸ್ತುತ ಪಡಿಸಿದರು.
ನಂತರ ಸವಾರಿ-2 ಚಿತ್ರದ ಪ್ರಸಿದ್ಧ ಗೀತೆ ನಿನ್ನ ಧನಿಗಾಗಿ, ನಿನ್ನ ಕರೆಗಾಗಿ’ ಸುಮಧರ ಯುಗಳ ಗೀತೆಯನ್ನ ಹಂಸಿಕಾ ನಾಯರ್ ಸಹ ಕಲಾವಿದರೊಂದಿಗೆ ಹಾಡಿದರು. ಸವಾರಿ-1 ಚಿತ್ರದ ‘ಮರಳಿ ಮರೆಯಾಗಿ’ ಪುನೀತ್ ರಾಜಕುಮಾರ್ ಅಭಿನಯದ ಪೃಥ್ವಿ ಚಿತ್ರದ ‘ನಿನಗಾಗಿ’ ಹೀರೋ ಚಿತ್ರದ ಶಾಕುಂತಲ ನಕ್ಕಳು ಸೇರಿದಂತೆ ಇತರೆ ಗೀತೆಗಳನ್ನು ಸಂಗೀತ ಸಂಜೆಯಲ್ಲಿ ಹಾಡಲಾಯಿತು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಸವರಾಜ ವಿ.ಶಿವಗಂಗಾ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಂಗೀತ ಸಂಜೆಯನ್ನು ಸವಿದರು.