ದಾವಣಗೆರೆ : ಹೊರಗೆ ಶೀತಗಾಳಿ, ಮೈಕೊರೆಯುವ ಚಳಿ. ಆದರೆ ಬಿಐಇಟಿ ಆವರಣದ ಸಾಂಸ್ಕೃತಿಕ ಕೇಂದ್ರದೊಳಗೆ ಮಾತ್ರ ರಾಗಗಳ ಮಾಧುರ್ಯ ಕಲಾ ರಸಿಕರಿಗೆ ಹಿತಾನುಭವ ನೀಡಿತು. ದಾವಣಗೆರೆಯ ಪ್ರತಿಮಾ ಸಭಾ ಮತ್ತು ಪುಣೆಯ ಸ್ವರಮಯಿ ಸಂಸ್ಥೆಗಳ ಆಶ್ರಯದಲ್ಲಿ, ಡಾ. ಪ್ರಭಾ ಅತ್ರೆ ಮತ್ತು ಡಾ. ಎಂ.ಜಿ. ಈಶ್ವರಪ್ಪ ಸ್ಮರಣಾರ್ಥ ಭಾನುವಾರ ಆಯೋಜಿಸಿದ್ದ ‘ಸ್ವರಾಂಜಲಿ’ ಕಾರ್ಯಕ್ರಮ ಬೆಣ್ಣೆ ನಗರಿಯ ಸಂಗೀತ ಪ್ರಿಯರ ಮನ ಗೆದ್ದಿತು. ಡಾ.ಎಂ.ಜಿ. ಈಶ್ವರಪ್ಪ ಅವರ ಪುತ್ರ ಪೃಥುವೈನ್ಯ, ಪೂರಿಯಾ ಧನಶ್ರೀ ರಾಗದೊಂದಿಗೆ ಶುಭಾರಂಭ ಮಾಡಿದರು. ನಂತರ ‘ಬಿಟ್ಟೇನೆಂದರೆ ಬಿಡದೀ ಮಾಯೆ’ ಎಂಬ ವಚನ ಹಾಡಿದರು. ಸ್ಥಳೀಯ ಕಲಾವಿದನ ಪ್ರಸ್ತುತಿಗೆ ಶ್ರೋತೃಗಳು ಚಪ್ಪಾಳೆ ತಟ್ಟಿದರು. ನಂತರ ವೇದಿಕೆಯನ್ನು ಆವರಿಸಿದ್ದು ಡಾ. ಚೇತನಾ ಪಾಠಕ್ ಅವರ ಕಂಠಸಿರಿ. ಪ್ರಭಾ ಅತ್ರೆ ಅವರ ಶಿಷ್ಯೆ ಚೇತನಾ, ಯಮನ್ ರಾಗದ ಸೌಂದರ್ಯ ಉಣಬಡಿಸಿದರು. ಅವರಿಗೆ ಕೇಶವ ಜೋಷಿ (ತಬಲಾ), ಗುರುಪ್ರಸಾದ ಹೆಗಡೆ (ಹಾರ್ಮೋನಿಯಂ), ಸಮ್ಮಿತಾ ಮುತಾಲಿಕ್, ಚೇತನಾ (ತಾನಪುರಾ) ಸಾಥ್ ನೀಡಿದರು. ಪಂಡಿತ್ ವೆಂಕಟೇಶ ಕುಮಾರ್ ಅವರ ಗಾಯನ ಪ್ರಧಾನ ಆಕರ್ಷಣೆಯಾಗಿತ್ತು. ದುರ್ಗಾ ರಾಗವನ್ನು ಅವರು ಪ್ರಸ್ತುತಪಡಿಸಿದ ರೀತಿಗೆ ಶ್ರೋತೃಗಳು ತಲೆದೂಗಿದರು. ಒಂದೊಂದು ಬಂದಿಷ್‌ನಲ್ಲೂ ಅವರ ಪಾಂಡಿತ್ಯ ಎದ್ದು ಕಾಣುತ್ತಿತ್ತು. ಪ್ರಭಾ ಅತ್ರೆ ಅವರ ರಚನೆಯ ‘ಮಾತಾ ಭವಾನಿ ಕಾಲಿ’ ಎಂಬ ಬಂದಿಷ್ ಮೂಲಕ ರಂಜಿಸಿದರು. ಹಿರಿಯ ಕಲಾವಿದನ ದಶಕಗಳ ಸಾಧನೆಯ ವಿದ್ವತ್ತನ್ನು ಆಸ್ವಾದಿಸಲು ಇಡೀ ಸಭಾಂಗಣ ತುಂಬಿ ತುಳುಕುತ್ತಿತ್ತು. ... (ಬಾಕ್ಸ್) ಸಂಗೀತ ಸುಧೆ ಹೆಚ್ಚಾಗಲಿ ದಾವಣಗೆರೆ ಸಂಸ್ಕೃತಿ, ಸಭ್ಯತೆ ಮತ್ತು ದಾನಕ್ಕೆ ಹೆಸರಾಗಿದೆ. ಇಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಪದ್ಮಶ್ರೀ ಪಂಡಿತ್ ವೆಂಕಟೇಶ ಕುಮಾರ್ ಹೇಳಿದರು. ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು 14 ವರ್ಷದ ಬಾಲಕನಿದ್ದಾಗಿನಿಂದ ದಾವಣಗೆರೆಗೆ ಬರುತ್ತಿದ್ದೇನೆ. ಪಂಡಿತ ಪುಟ್ಟರಾಜ ಗವಾಯಿಗಳ ಜತೆಗೆ ಇಲ್ಲಿನ ಅಜ್ಜಂಪುರ ಶೆಟ್ರ ಮನೆಗೆ, ದೊಗ್ಗಳ್ಳಿ ಕಾಂಪೌಂಡ್‌ಗೆ ಬರುತ್ತಿದ್ದ ದಿನಗಳನ್ನು ಸ್ಮರಿಸಿದರು. ಪ್ರತಿಮಾ ಸಭಾ ಗೌರವ ಅಧ್ಯಕ್ಷ ಪ್ರೊ. ಎಸ್. ಹಾಲಪ್ಪ ಮಾತನಾಡಿ, ಪ್ರಭಾ ಅತ್ರೆ ಅವರು ಹಿಂದೂಸ್ತಾನಿ ಸಂಗೀತವನ್ನು ಬೆಳಗಿದ ನಕ್ಷತ್ರ. ಡಾ.ಎಂ.ಜಿ. ಈಶ್ವರಪ್ಪ ಅವರು ಜನಪ್ರಿಯ ಉಪನ್ಯಾಸಕರಾಗಿದ್ದರು ಎಂದು ಬಣ್ಣಿಸಿದರು. ವೆಂಕಟೇಶ ಕುಮಾರ್ ಅವರು ಪಂಡಿತ ಭೀಮಸೇನ ಜೋಷಿ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದರು. ಪ್ರತಿಮಾ ಸಭಾ ಅಧ್ಯಕ್ಷ ಬಾ.ಮ. ಬಸವರಾಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಂಬೈನ ಕಲಾವಿದೆ ಡಾ. ಚೇತನಾ ಪಾಠಕ್, ಪ್ರತಿಮಾ ಸಭಾದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಲ್ಲೇಶ್, ಖಜಾಂಚಿ ಸಂಪನ್ನ ಮುತಾಲಿಕ್ ವೇದಿಕೆಯಲ್ಲಿದ್ದರು. ಆರ್.ಟಿ. ಅರುಣ್ ಕುಮಾರ್, ಎಸ್.ಎಸ್. ಸಿದ್ಧರಾಜು, ನಾಗರಾಜ ಸಿರಿಗೆರೆ, ಎನ್.ಟಿ. ಮಂಜುನಾಥ್, ಗೋಪಾಲಕೃಷ್ಣ, ಮಾಧವಿ ಇತರ ಪದಾಧಿಕಾರಿಗಳು, ಸದಸ್ಯರು ಇದ್ದರು. ಡಾ. ಶೃತಿ ರಾಜ್ ಕಾರ್ಯಕ್ರಮ ನಿರೂಪಿಸಿದರು.