ದಾವಣಗೆರೆ : ಪಕ್ಷದಿಂದ ಹೋಗುವವರು ಹೋಗಬಹುದು, ಬರುವವರು ಬರಬಹುದು. ನಾನಂತೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತೇನೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪಕ್ಷ ಬಿಡುವ ಸಾಧ್ಯತೆಯ ಬಗ್ಗೆ ಎದ್ದಿರುವ ಪ್ರಶ್ನೆಗೆ ಉತ್ತರಿಸಿದರು.
ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರನ್ನು ಕರೆದು ಮಾತನಾಡಿಸುತ್ತೀರಾ ಎಂಬ ಪ್ರಶ್ನೆಗೆ ನಾನೇಕೆ ಹಾಗೆ ಮಾಡಲಿ, ಬೇಕಿದ್ದರೆ ರಾಜ್ಯದ ವರಿಷ್ಠರು ಆ ಕೆಲಸ ಮಾಡುತ್ತಾರೆ. ನಾನಂತೂ ಚುನಾವಣೆಗೆ ತಯಾರಿ ನಡೆಸಿದ್ದೇನೆ, ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದೇನೆ, ಕೆಲಸ ಮಾಡುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ 40 ಪರ್ಸೆಂಟ್ ಸರ್ಕಾರ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದರು. ನಮ್ಮ ಜಿಲ್ಲೆಯಲ್ಲೂ ಆ ರೀತಿ ಆರೋಪ ಕೇಳಿಬಂದಿತ್ತು. ಈಗ ಗುತ್ತಿಗೆದಾರರ ಬಳಿಯೇ ಕೋಟ್ಯಂತರ ರೂ.ಗಳು ಸಿಕ್ಕಿವೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ಸಕ್ಕರೆ ಕಾರ್ಖಾನೆಗಳನ್ನು ನ. 1ರ ವರೆಗೆ ಆರಂಭಿಸಬಾರದು ಎಂದು ಸಕ್ಕರೆ ವಿಭಾಗದ ಆಯುಕ್ತರು ನೋಟಿಸ್ ನೀಡಿದ್ದಾರೆ. ಉತ್ಪಾದನೆ ಆರಂಭವಾದ ನಂತರ ರಾಜ್ಯದ ಸಕ್ಕರೆ ರ್ಕಾನೆಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಸರ್ಕಾರ ನ್ಯಾಯವಾದ ಬೆಲೆ ನೀಡಿ ಖರೀದಿಸಿ ರೈತರಿಗೆ ಒದಗಿಸಲಿ ಎಂದು ಒತ್ತಾಯಿಸಿದರು.