ಜಿಲ್ಲೆ

ಲೋಕಸಭಾ ಕ್ಷೇತ್ರ ಬರಪೀಡಿತವೆಂದು ಘೋಷಿಸಿ

ರಮೇಶ ಜಹಗೀರದಾರ್

ದಾವಣಗೆರೆ : ತೀವ್ರ ಮಳೆ ಕೊರತೆ ಕಾರಣದಿಂದ  ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತಾಪಿವರ್ಗಕ್ಕೆ ಆಸರೆಯಾಗಲು ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಬರಪೀಡಿತ ಎಂದು ಘೋಷಣೆ ಮಾಡುವಂತೆ ಸಂಸದ ಜಿ.ಎಂ. ಸಿದ್ದೇಶ್ವರ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
 ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯಯ್ಯ, ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಪತ್ರ ಬರೆದು ಒತ್ತಾಯಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಜಿಲ್ಲೆಯಲ್ಲಿ 6 ತಾಲೂಕುಗಳಿವೆ. ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹರಪನಹಳ್ಳಿ ಸೇರಿ 7 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. ಒಟ್ಟು ಬಿತ್ತನೆಯಾಗಿರುವ 1.85 ಲಕ್ಷ ಹೆಕ್ಟೇರ್‌ನಲ್ಲಿ ಭತ್ತದ ನಾಟಿ ಹೊರತುಪಡಿಸಿ 1.63 ಲಕ್ಷ ಹೆಕ್ಟೇರ್‌ನಲ್ಲಿ ಸುಮಾರು 1.27 ಲಕ್ಷ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯಾಗಿದೆ. ಇನ್ನುಳಿದ 0.33 ಸಾವಿರ ಹೆಕ್ಟೇರ್‌ನಲ್ಲಿ ಇತರೆ ಬೆಳೆಗಳಿವೆ. 1.63 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿರುವ ಸಂಪೂರ್ಣ ಬೆಳೆ ಸಕಾಲದಲ್ಲಿ ಮಳೆಯಿಲ್ಲದೇ ಒಣಗಿಹೋಗಿವೆ.
 ಬಿತ್ತನೆಪೂರ್ವ ಪ್ರಕ್ರಿಯೆ ಹಾಗೂ ನಂತರದ ಬೆಳೆಗಳ ಪೋಷಣೆ ಸೇರಿ ರೈತರು ಪ್ರತಿ ಎಕರೆಗೆ  ಕನಿಷ್ಟ 20 ಸಾವಿರದಷ್ಟು ಹಣ ಖರ್ಚು ಮಾಡಿದ್ದಾರೆ. ಜಿಲ್ಲೆಯು ಈಗಾಗಲೇ ಸಾಕಷ್ಟು ಮಳೆ ಅಭಾವ ಎದುರಿಸಿರುವುದು ಹಾಗೂ ಬೆಳೆಹಾನಿ ಸಂಭವಿಸಿರುವುದರಿಂದ ಬರ ಎಂದು ಘೋಷಣೆ ಮಾಡುವ ಅನಿವಾರ್ಯತೆಯಿದೆ ಎಂದಿದ್ದಾರೆ.
 ಹಾಕಿದ ಬಂಡವಾಳವೂ ರೈತರಿಗೆ ಸಿಗದ ಪರಿಸ್ಥಿತಿ ಇರುವುದರಿಂದ ಕೂಡಲೇ ಜಿಲ್ಲೆಯ ದಾವಣಗೆರೆ, ಹರಿಹರ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಜಗಳೂರು ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುವುದರ ಮೂಲಕ ಸಂಕಷ್ಟದಲ್ಲಿರುವ ರೈತರ ಹಿತಕಾಯಬೇಕು ಎಂದು ಆಗ್ರಹಿಸಿದ್ದಾರೆ.