ದಾವಣಗೆರೆ : ಚಂದ್ರಯಾನ-3ರ ಯಶಸ್ಸು ಭಾರತದ ಜಾಗತಿಕ ಮನ್ನಣೆಯ ಕಿರೀಟಕ್ಕೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಬಣ್ಣಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಒಂದೂವರೆ ಶತ ಕೋಟಿ ಭಾರತೀಯರ ಪ್ರಾರ್ಥನೆಯ ಫಲ ಸಾರ್ಥಕವಾಗಿದೆ. ದೇಶದ ಪಾಲಿಗೆ ಇದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನವಾಗಿದೆ ಎಂದು ತಿಳಿಸಿದ್ದಾರೆ.
ಚಂದ್ರಯಾನ-3ರ ಯಶಸ್ಸು ಆತ್ಮನಿರ್ಭರ ಭಾರತಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಸೋತಾಗ ಕಡೆಗಣಿಸದೆ ಬೆನ್ನುತಟ್ಟಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಮೂಲಕ ಅಭಯ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ನಿಮ್ಮ ನಂಬಿಕೆಯನ್ನು ಯಾವುದೇ ಕಾರಣಕ್ಕೂ ಹುಸಿಗೊಳಿಸುವುದಿಲ್ಲ ಎಂದು ಭರವಸೆ ನೀಡಿದ ಇಸ್ರೋ ತಂಡದವರು ಸಾರ್ವಕಾಲಿಕ ಉದಾಹರಣೆಯಾಗಿದ್ದಾರೆ ಎಂದು ಹೇಳಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಚಂದ್ರಯಾನ-2 ವಿಫಲವಾದಾಗ ನಮ್ಮ ಪ್ರಧಾನಿ ಮೋದಿ ಇಸ್ರೋ ತಂಡಕ್ಕೆ ತುಂಬಿದ ಧೈರ್ಯ ವಿಜ್ಞಾನಿಗಳಲ್ಲಿನ ಆತ್ಮವಿಶ್ವಾಸವನ್ನು ನೂರ್ಮಡಿಗೊಳಿಸಿತು. 54 ಮಹಿಳೆಯರು ಸೇರಿ ಹಲವಾರು ವಿಜ್ಞಾನಿಗಳು ಹಗಲಿರುಳೆನ್ನದೆ ಶ್ರಮ ಪಟ್ಟು ಇಡೀ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ. ಉದ್ದೇಶಿತ ಆದಿತ್ಯ ಲೈನ್-1 ಸೇರಿ ಇಸ್ರೋದ ಭವಿಷ್ಯದ ಎಲ್ಲ ಯೋಜನೆಗಳು ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.l