ದಾವಣಗೆರೆ : ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಅಗತ್ಯವಿರುವ 16,568 ಮೆಟ್ರಿಕ್ ಟನ್ ಯೂರಿಯಾ ಪೂರೈಕೆ ಮಾಡಬೇಕೆಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಅವರಿಗೆ ಮನವಿ ಸಲ್ಲಿಸಿದರು. ನವದೆಹಲಿಯಲ್ಲಿ ಗುರುವಾರ ಕೇಂದ್ರ ಸಚಿವರನ್ನು ನಿಯೋಗದೊಂದಿಗೆ ಭೇಟಿಯಾದ ಸಂಸದೆ, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪ್ರಸ್ತುತ ಮುಂಗಾರು ಮಳೆ ಉತ್ತಮವಾಗಿದ್ದು ರೈತರಿಗೆ ಯೂರಿಯಾ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿದರು. ಕ್ಷೇತ್ರಕ್ಕೆ ಏಪ್ರಿಲ್ನಿಂದ ಸೆಪ್ಟೆಂಬರ್ ವರೆಗೆ ಒಟ್ಟು 54,162 ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದೆ. ಏಪ್ರಿಲ್ನಿಂದ ಜುಲೈವರೆಗೆ ಸುಮಾರು 24,388 ಮೆಟ್ರಿಕ್ ಟನ್‌ವರೆಗೂ ಯೂರಿಯಾ ಬಂದಿದೆ. 37,594 ಮೆಟ್ರಿಕ್ ಟನ್ ಅವಶ್ಯಕತೆ ಇದೆ ಎಂದು ಗಮನ ಸೆಳೆದರು. ಜಿಲ್ಲೆಯಲ್ಲಿ ಮುಂಗಾರು ಅವಧಿಗೂ ಮುನ್ನ ಆರಂಭವಾಗಿದ್ದು, ಮಳೆ ಪ್ರಮಾಣ ಶೇ. 41 ರಷ್ಟು ಹೆಚ್ಚಾಗಿದೆ, ಆದ್ದರಿಂದ ಬಿತ್ತನೆ ಪ್ರಮಾಣ ಶೇ. 103 ರಷ್ಟು ಹೆಚ್ಚಾಗಿದ್ದು, ಯೂರಿಯಾ ಬೇಡಿಕೆಯು ಅಗತ್ಯಕ್ಕಿಂತ ಹೆಚ್ಚಾಗಿದೆ. ಆದ್ದರಿಂದ ಅಗತ್ಯವಿರುವ 16,568 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಪೂರೈಕೆ ಮಾಡಲು ಅಗತ್ಯ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು. ಸಂಸದರಾದ ಸಾಗರ್ ಖಂಡ್ರೆ, ಕುಮಾರ್ ನಾಯ್ಕ್, ತುಕಾರಾಂ ಅವರು ನಿಯೋಗದಲ್ಲಿದ್ದರು.