ಜಿಲ್ಲೆ

ನಿರ್ಮಾಣಕ್ಕೆ 10 ಲಕ್ಷ ರೂ. ನೀಡಲು ಮನವಿ

ರಮೇಶ ಜಹಗೀರದಾರ್

ದಾವಣಗೆರೆ  : ದೇವದಾಸಿ ಮಹಿಳೆಯರ ಮಕ್ಕಳಿಗೆ ನಿವೇಶನ ಮತ್ತು ಮನೆ ನಿರ್ಮಿಸಿಕೊಳ್ಳಲು ಸರ್ಕಾರ 10 ಲಕ್ಷ ರೂ. ನೀಡಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.  ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ, ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಪಂಗಡಗಳ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದರು.  ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಬೇಕು. ವೈಜ್ಞಾನಿಕವಾಗಿ ಅವರ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸಬೇಕು. ಆದರೆ ಅಧಿಕಾರಿಗಳು ಈ ಕೆಲಸ ಮಾಡುತ್ತಿಲ್ಲ ಎಂದು ಸಿಎಂ ಗಮನಕ್ಕೆ ತಂದರು.  ದೇವದಾಸಿ ಮಹಿಳೆಯರ ಮಕ್ಕಳಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಪ್ರಸ್ತುತ 2 ಲಕ್ಷ ರೂ. ನೀಡುತ್ತಿದೆ. ಆ ಹಣ ಸಿಮೆಂಟ್, ಮರಳು ತರಲೂ ಸಾಕಾಗುವುದಿಲ್ಲ. ಸರ್ಕಾರ ಕನಿಷ್ಠ 10 ಲಕ್ಷ ರೂ. ನೀಡಿದರೆ ಸೂರು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಮನವಿ ಮಾಡಿದರು.  ಸ್ಥಳೀಯ ಸಂಸ್ಥೆಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ನಿವೇಶನಕ್ಕಾಗಿ ಅರ್ಜಿ ಆಹ್ವಾನಿಸಿದ ಸಂದರ್ಭದಲ್ಲಿ ದೇವದಾಸಿ ಮಕ್ಕಳಿಗೆ ಶೇ.5ರಷ್ಟು ನಿವೇಶನ ಮೀಸಲಿಡಬೇಕು ಎಂದು ಮನವಿ ಮಾಡಿದರು.  ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದಲ್ಲಿ ಇನ್ನೂ ದೇವದಾಸಿ ಪದ್ಧತಿ ಮುಂದುವರಿದಿದೆ. ಇದನ್ನು ತಡೆಯಲು ಅಧಿಕಾರಿಗಳು ಮುಂದಾಗುತ್ತಿಲ್ಲ. ನರ ದೌರ್ಬಲ್ಯದಿಂದ ಮಹಿಳೆಯರಿಗೆ ಕೂದಲು ಗಂಟು ಬೀಳುತ್ತವೆ. ಇದು ದೇವರ ಮುಡಿ ಎಂದು ಬಿಟ್ಟುಕೊಳ್ಳುತ್ತಾರೆ. ಅವರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.