ದಾವಣಗೆರೆ : ನಗರದ ಗಾಜಿನ ಮನೆಯ ಸೌಂದರ್ಯೀಕರಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಗಾಜಿನ ಮನೆ ನಮ್ಮ ಕಾಲದಲ್ಲೇ ನಿರ್ಮಾಣವಾಗಿತ್ತು. ಗಾಜುಗಳು ಒಡೆದಿರುವ ಕಡೆಗಳಲ್ಲಿ ಹೊಸ ಗಾಜುಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯುದ್ದೀಪಗಳಿಂದ ಇನ್ನಷ್ಟು ಕಳೆಗಟ್ಟುವಂತೆ ಮಾಡುವ ಉದ್ದೇಶವಿದೆ ಎಂದರು.
ಅಲ್ಲಿನ ಕಾರಂಜಿಯ ಕುರಿತು ಪ್ರಶ್ನಿಸಿದಾಗ, ‘ಬಿಲ್ ಪಾವತಿಯಾಗಿದೆ, ಆದರೆ ಕಾರಂಜಿ ಆಗಿಲ್ಲ’, ಮುಂಬರುವ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಹೇಳಿದರು.
ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯದಲ್ಲೀಗ ಬರಗಾಲವಿದೆ. ಡಿಸೆಂಬರ್ ನಂತರ ಆ ಕುರಿತು ಚರ್ಚಿಸಿ ಮುಂದಿನ ಬಜೆಟ್‌ನಲ್ಲಿ ಸೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಭದ್ರಾ ನಾಲೆಯ ನೀರನ್ನು ಕೆರೆಗಳಿಗೆ ತುಂಬಿಸುವ ಕೆಲಸ ನಡೆದಿದೆ. ನಗರದ ಟಿವಿ ಸ್ಟೇಷನ್ ಕೆರೆಯೂ ತುಂಬುವ ಹಂತಕ್ಕೆ ಬಂದಿದೆ. ಸದ್ಯಕ್ಕೆ ಕುಡಿಯುವ ನೀರಿನ ಗಂಭೀರ ಸಮಸ್ಯೆಯೇನೂ ಇಲ್ಲ. ರೈತರ ಒಂದು ಬೆಳೆಗೆ ನೀರು ಕೊಡುವುದು ನಮ್ಮ ಆದ್ಯತೆಯಾಗಿದೆ ಎಂದರು.
...
* ಪಟೇಲರ ಹಾಸ್ಯ ಚಟಾಕಿ ನೆನಪು
ಬೆಳಗಾವಿ ಗ್ಯಾಂಗ್‌ನಿಂದಲೇ ಕಾಂಗ್ರೆಸ್ ಸರ್ಕಾರದ ಪತನವಾಗಲಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸುವ ವೇಳೆ ಸಚಿವ ಮಲ್ಲಿಕಾರ್ಜುನ್, ಮಾಜಿ ಸಿಎಂ ಜೆ.ಎಚ್. ಪಟೇಲರ ಹಾಸ್ಯ ಚಟಾಕಿಯನ್ನು ನೆನಪಿಸಿದರು.
ಸರ್ಕಾರವಂತೂ ಬೀಳುವುದಿಲ್ಲ, ಆದರೆ ಕೆಲವರು ಬೀಳುತ್ತದೆ ಎಂದುಕೊಂಡು ಕಾಯುತ್ತಿರಬಹುದು. ಹಾಗಾಗಿ ಪಟೇಲರ ಮಾತನ್ನು ಪುನರಾವರ್ತನೆ ಮಾಡಿಸಬೇಡಿ ಎಂದು ಸಚಿವರು ಹೇಳಿದರು.
...