ಜಿಲ್ಲೆ

ಪಕ್ಷದ ಬಾವುಟ ಹಿಡಿದು ದುಡಿದವರಿಗೆ ಆದ್ಯತೆ

ರಮೇಶ ಜಹಗೀರದಾರ್

ದಾವಣಗೆರೆ : ಪಕ್ಷದ ಬಾವುಟ ಹಿಡಿದು, ಪೋಸ್ಟರ್ ಅಂಟಿಸಿ ಚುನಾವಣೆಯಲ್ಲಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
 ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲು ಕಾರ್ಯಕರ್ತರು ಗುರುತಿಸಬೇಕು. ಪಕ್ಷದಲ್ಲಿ ಎಲ್ಲರ ಪರಿಚಯವೂ ಇರಬೇಕು. ಸಂಘಟನೆಯಲ್ಲಿ ಎಲ್ಲರೊಂದಿಗೆ ಬೆರೆಯಬೇಕು. ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರನ್ನು ಭೇಟಿಯಾಗಬೇಕು. ಹೈಕಮಾಂಡ್‌ನವರು ಯಾರಿಗೆ ಟಿಕೆಟ್ ನೀಡುವರೋ ಅವರು ಅಭ್ಯರ್ಥಿಯಾಗುತ್ತಾರೆ. ಎಲ್ಲಿಂದಲೋ ಬಂದು ತಾನೇ ಅಭ್ಯರ್ಥಿ ಎಂದುಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.
 ವನ್ಯಜೀವಿಗಳ ಅಕ್ರಮ ಸಾಕಣೆ ಪ್ರಕರಣದಲ್ಲಿ ಹೈಕೋರ್ಟ್ ಎಫ್‌ಐಆರ್ ರದ್ದುಗೊಳಿಸಿರುವ ಬಗ್ಗೆ ಲಿಖಿತ ಆದೇಶ ಪ್ರತಿ ಇನ್ನೂ ಸಿಕ್ಕಿಲ್ಲ. ಅದು ಬಂದ ನಂತರ ಮಾತನಾಡುವೆ. ನ್ಯಾಯಕ್ಕೆ ಬೆಲೆಯಿದೆ ಎಂದಷ್ಟೇ ಉತ್ತರಿಸಿದರು. ಅಧಿಕೃತವಾಗಿ ಆದೇಶ ಬಂದ ನಂತರ ಅನೇಕ ವಿಷಯಗಳನ್ನು ಹೇಳುವುದಿದೆ ಎಂದರು.
 ಲಿಂಗಾಯತ ಅಧಿಕಾರಿಗಳ ಕಡೆಗಣನೆ ಕುರಿತು ಕೇಳಿದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.