ದಾವಣಗೆರೆ : ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಮ್ಮ 58ನೇ ಜನ್ಮದಿನವನ್ನು ಅಪಾರ ಸಂಖ್ಯೆಯ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಹಿತೈಷಿಗಳೊಂದಿಗೆ ಸೋಮವಾರ ಸಂಭ್ರಮದಿಂದ ಆಚರಿಸಿಕೊಂಡರು. ಬೆಳಗ್ಗೆ ನಗರ ದೇವತೆ ದುರ್ಗಾಂಬಿಕಾ ದೇವಿಗೆ ದೀಪ ಬೆಳಗಿಸಿ ದಸರಾ ಹಬ್ಬಕ್ಕೆ ಚಾಲನೆ ನೀಡುವುದರೊಂದಿಗೆ ಅವರ ದಿನಚರಿ ಆರಂಭವಾಯಿತು. ಇಡೀ ದಿನ ಎಡೆಬಿಡದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಎಂಎಲ್ಸಿ ಮಂಜುನಾಥ ಭಂಡಾರಿ, ಶಾಸಕರಾದ ಬಿ. ದೇವೇಂದ್ರಪ್ಪ, ಲತಾ ಮಲ್ಲಿಕಾರ್ಜುನ್ ಸೇರಿ ಅನೇಕ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಚಿವ ಮಲ್ಲಿಕಾರ್ಜುನ್ ಅವರಿಗೆ ಶುಭ ಹಾರೈಸಿದರು. ಕುಟುಂಬದ ಸದಸ್ಯರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಎಸ್‌ಎಸ್‌ಎಂ ಅಭಿಮಾನಿಗಳ ಬಳಗದಿಂದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಹಿರಿಯರು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಿಂದ ಸಚಿವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಎಸ್‌ಎಸ್ ಕೇರ್ ಟ್ರಸ್ಟ್ ವಿದ್ಯಾರ್ಥಿ ವಿಭಾಗ ಹಾಗೂ ಕೇಂದ್ರ ಸರ್ಕಾರದ ಅಲಿಂಕೋ ಸಂಸ್ಥೆ, ಸಿಆರ್‌ಸಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 32 ಅಂಗವಿಕಲರು, 101 ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ವಿತರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಪ್ರತಿ ವರ್ಷ ಜನವರಿ ಮತ್ತು ಡಿಸೆಂಬರ್ ತಿಂಗಳಲ್ಲಿ ಇಂಥ ಶಿಬಿರಗಳನ್ನು ಆಯೋಜಿಸಿ ಅರ್ಹರಿಗೆ ಸಾಧನ ಸಲಕರಣೆ ನೀಡಲಾಗುವುದು ಎಂದು ತಿಳಿಸಿದರು. ಸಚಿವರ ಜನ್ಮದಿನ ಅಂಗವಾಗಿ ಎಸ್‌ಎಸ್‌ಐಎಂಎಸ್ ಮತ್ತು ಆರ್‌ಸಿ ಕ್ಯಾಂಪಸ್‌ನಲ್ಲಿ ಬಾಪೂಜಿ ಫಿಜಿಯೋಥೆರಪಿ ಕಾಲೇಜು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಆವರಣದಲ್ಲಿ ಜಿಲ್ಲಾ ಹಾಪ್‌ಕಾಮ್ಸ್ ಮಳಿಗೆ ಉದ್ಘಾಟಿಸಲಾಯಿತು. ವೃದ್ಧಾಶ್ರಮದಲ್ಲಿ ಉಪಾಹಾರ, ಸೀರೆ ವಿತರಣೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ, ಪೊಲೀಸ್ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಉಡುಗೊರೆ ಮುಂತಾದ ಸೇವಾ ಕಾರ್ಯಕ್ರಮಗಳು ನಡೆದವು. ಸಂಗೀತ ಸಂಜೆ, ನಿಟ್ಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.