ಜಿಲ್ಲೆ

ಎಸ್ಸೆಸ್ಸೆಂ ಜನ್ಮದಿನದ ಅಂಗವಾಗಿ ಕಾರ್ಯಕ್ರಮ ವೈವಿಧ್ಯ

ರಮೇಶ ಜಹಗೀರದಾರ್

ದಾವಣಗೆರೆ : ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ 58ನೇ ಜನ್ಮ ದಿನಾಚರಣೆ ಸೋಮವಾರ ನಡೆಯಲಿದ್ದು, ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಇಡೀ ದಿನ ಎಡೆಬಿಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಸಚಿವ ಮಲ್ಲಿಕಾರ್ಜುನ್ ಬೆಳಗ್ಗೆ 6.30ಕ್ಕೆ ನಗರ ದೇವತೆ ದುರ್ಗಾಂಬಿಕಾ ದೇವಿಗೆ ದೀಪ ಬೆಳಗಿಸುವ ಮೂಲಕ ದಸರಾ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.  ಬೆಳಗ್ಗೆ 8.30ಕ್ಕೆ ಎಂಸಿಸಿ ‘ಎ’ ಬ್ಲಾಕ್‌ನ ಸಾಯಿಬಾಬ ಮಂದಿರ ರಸ್ತೆಯಲ್ಲಿರುವ ವೃದ್ಧಾಶ್ರಮಕ್ಕೆ ಅಭಿಮಾನಿಗಳಿಂದ ಉಪಾಹಾರ ಮತ್ತು ಸೀರೆ ವಿತರಣೆ ನಡೆಯಲಿದೆ.  ಬಾಪೂಜಿ ವಿದ್ಯಾಸಂಸ್ಥೆಯಿಂದ 9.30ಕ್ಕೆ ಎಸ್‌ಎಸ್‌ಐಎಂಎಸ್ ಮತ್ತು ಆರ್‌ಸಿ ಕ್ಯಾಂಪಸ್‌ನಲ್ಲಿ ಬಾಪೂಜಿ ಫಿಜಿಯೋಥೆರಪಿ ಕಾಲೇಜಿನ ಉದ್ಘಾಟನೆ ನೆರವೇರಲಿದೆ.  ಬೆಳಗ್ಗೆ 10.30ಕ್ಕೆ ಕುವೆಂಪು ಕನ್ನಡ ಭವನದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಜಿಲ್ಲೆಯ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.  ಬೆಳಗ್ಗೆ 11.30ಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಎಸ್‌ಎಸ್‌ಎಂ ಅಭಿಮಾನಿಗಳ ಬಳಗದಿಂದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಹಿರಿಯರು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.  11.45ಕ್ಕೆ ಜಿಲ್ಲಾ ಹಾಪ್‌ಕಾಮ್ಸ್ ವತಿಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಆವರಣದಲ್ಲಿ ಜಿಲ್ಲಾ ಹಾಪ್‌ಕಾಮ್ಸ್ ಮಳಿಗೆ ಉದ್ಘಾಟನೆ ನಡೆಯಲಿದೆ.  ಸಂಜೆ 5.30ಕ್ಕೆ ವಿಠ್ಠಲ ಮಂದಿರ ಸಮುದಾಯ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಉಡುಗೊರೆ ಹಾಗೂ ಉಪಾಹಾರ ವಿತರಣೆ ಮಾಡಲಾಗುವುದು.  ಸಂಜೆ 7 ಗಂಟೆಗೆ ಎಸ್‌ಎಸ್‌ಎಂ ಅಭಿಮಾನಿಗಳಿಂದ ಬಾಪೂಜಿ ಬ್ಯಾಂಕ್ ಸಮಾಾಯ ಭವನದಲ್ಲಿ ಸಂಗೀತ ಸಂಜೆಯನ್ನು ಆಯೋಜಿಸಲಾಗಿದೆ.  ಸಂಜೆ 7.30ಕ್ಕೆ ನಿಟ್ಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಲಿದೆ.  ...    (ಬಾಕ್ಸ್)  ಸಾಧನ ಸಲಕರಣೆ ವಿತರಣೆ  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜನ್ಮದಿನದ ಪ್ರಯುಕ್ತ ಎಸ್‌ಎಸ್ ಕೇರ್ ಟ್ರಸ್ಟ್ ವಿದ್ಯಾರ್ಥಿ ವಿಭಾಗ ಹಾಗೂ ಕೇಂದ್ರ ಸರ್ಕಾರದ ಅಲಿಂಕೋ ಸಂಸ್ಥೆ, ಸಿಆರ್‌ಸಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ನಗರದ ಶ್ರೀ ಸದ್ಯೋಜ್ಯಾತ ಮಠದಲ್ಲಿ ಸೋಮವಾರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.  ಸೆ. 10 ರಂದು ಶಾಮನೂರು ರಸ್ತೆಯಲ್ಲಿರುವ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ದಾವಣಗೆರೆ ಉತ್ತರ, ದಕ್ಷಿಣ ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಯ ಮೌಲ್ಯಮಾಪನ ಶಿಬಿರ ಆಯೋಜಿಸಲಾಗಿತ್ತು.  ಈ ವೇಳೆ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಫಲಾನುಭವಿಗಳು ಭಾಗವಹಿಸಿದ್ದರು. ಸಮಗ್ರ ಪರಿಶೀಲನೆಯ ನಂತರ ಆಯ್ಕೆಯಾದ 343 ಅರ್ಹ ಫಲಾನುಭವಿಗಳಿಗೆ 995 ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು.  ಮೊದಲ ಹಂತದಲ್ಲಿ ದಾವಣಗೆರೆ ಉತ್ತರ, ದಕ್ಷಿಣ ಮತ್ತು ಮಾಯಕೊಂಡ ವಿಧನಾಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿಬಿರ ಆಯೋಜಿಸಲಾಗಿದ್ದು, ಉಳಿದ ಐದು ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಶಿಬಿರ ನಡೆಸಲಾಗುವುದು.  ಈ ಕಾರ್ಯಕ್ರಮದಲ್ಲಿ ಅಂಧರಿಗೆ ಮೊಬೈಲ್, ವೈಬ್ರೇಟಿಂಗ್ ಸ್ಟಿಕ್ ಹಾಗೂ ವೀಲ್ ಚೇರ್, ತ್ರಿಚಕ್ರ ವಾಹನ ಸೇರಿ 28.82 ಲಕ್ಷ ಮೌಲ್ಯದ ಸಲಕರಣೆಗಳನ್ನು ವಿತರಿಸಲಾಗುವುದು.  ಆದ್ದರಿಂದ ಅರ್ಹ ಫಲಾನುಭವಿಗಳು ಹಿಂದಿನ ಶಿಬಿರದಲ್ಲಿ ನೀಡಲಾಗಿದ್ದ ಟೋಕನ್‌ನೊಂದಿಗೆ ಹಾಜರಾಗಿ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಡಾ. ಪ್ರಭಾ ಮಲ್ಲಿಕಾರ್ಜುನ್ ಮನವಿ ಮಾಡಿದ್ದಾರೆ.