ದಾವಣಗೆರೆ : ಸಮಾಜದಲ್ಲಿ ಶಾಂತಿ, ಸೌಹಾರ್ದತೆಯಿಂದ ಇರಬೇಕು. ಕಾಲು ಕೆರೆದು ಜಗಳ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ನಗರದ ಮಟ್ಟಿಕಲ್‌ನಲ್ಲಿ ಉಂಟಾದ ಫ್ಲೆಕ್ಸ್ ವಿವಾದದ ಕುರಿತು ಪ್ರತಿಕ್ರಿಯಿಸಿದರು. ಜಿಲ್ಲೆಯಲ್ಲಿ ಹಿಂದು-ಮುಸ್ಲಿಮರು ಶಾಂತಿ, ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ, ಅದನ್ನು ಹಾಳು ಮಾಡುವುದು ಬೇಡ. ಈ ಹಿಂದೆ ನಡೆದಿದ್ದ ಕೋಮು ಗಲಭೆಗಳು ಮರುಕಳಿಸಲು ಆಸ್ಪದ ನೀಡಬಾರದು ಎಂದರು. ಆಕ್ಷೇಪಾರ್ಹ ಫ್ಲೆಕ್ಸನ್ನು ಸೂಕ್ಷ್ಮ ಪ್ರದೇಶದಲ್ಲೇ ಹಾಕಿದ್ದೇಕೆ. ಅವರಿಗೆ ಬೇರೆ ಕೆಲಸ ಇಲ್ಲವೆ?. ಬೇಕಿದ್ದರೆ ನಮ್ಮ ಮನೆಯ ಮುಂದೆ ಹಾಕಲಿ. ಅನ್ಯ ಕೋಮಿನವರ ಹಬ್ಬದ ದಿನದಂದೇ ಗಣೇಶನನ್ನು ವಿಸರ್ಜಿಸುವುದು, ಪ್ರಾರ್ಥನಾ ಮಂದಿರದ ಮುಂದೆ ಗಣೇಶನನ್ನು ಪ್ರತಿಷ್ಠಾಪಿಸುವುದರ ಉದ್ದೇಶವೇನು ಎಂದು ಪ್ರಶ್ನಿಸಿದರು. ಎಲ್ಲರೂ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದಾರೆ. ಇಂಥದರಲ್ಲಿ ಗಲಭೆಗಳನ್ನು ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು ಎಂದು ಹೇಳಿದರು.