ದಾವಣಗೆರೆ: ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಆಗಬಾರದ್ದು ಆಗಿದೆ, ಮಾಡಬಾರದ್ದನ್ನು ಮಾಡಿದ್ದಾರೆ. ಅದನ್ನೆಲ್ಲ ಸರಿಪಡಿಸಿ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿವಿಧ ಯೋಜನೆಗಳಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
ಜಲಸಿರಿ ಯೋಜನೆಯ ಕೆಲಸ ಪೂರ್ಣವಾಗದಿದ್ದರೂ ಈ ಹಿಂದೆ ಆಡಳಿತ ನಡೆಸಿದವರು ಉದ್ಘಾಟನೆ ಮಾಡಿದರು. ಅದನ್ನೆಲ್ಲ ಸರಿಪಡಿಸಿ ಹೊಸ ಸ್ವರೂಪ ನೀಡಲಾಗುವುದು ಎಂದು ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆಯ ಲೋಪಗಳನ್ನು ತಪಾಸಣೆ ಮಾಡಿ ವರದಿ ನೀಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.
ನಮ್ಮ ಜಿಲ್ಲೆಯವರೇ ಉಸ್ತುವಾರಿ ಸಚಿವರಿದ್ದಾಗ ಅಭಿವೃದ್ಧಿ ಮಾಡಲು ಅನುಕೂಲವಾಗುತ್ತದೆ. ಆದರೆ ದುರದೃಷ್ಟವಶಾತ್ ಕಳೆದ 5 ವರ್ಷ ನಮ್ಮ ಜಿಲ್ಲೆಯವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಸ್ವಾತಂತ್ರೊೃೀತ್ಸವದಂದು ಧ್ವಜಾರೋಹಣ ಮಾಡುವ ಅವಕಾಶ ಒದಗಿ ಬಂದಿರಲಿಲ್ಲ. ಈಗ ತಮಗೆ ಅಂಥ ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗಿದೆ ಎಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಲಾಗುವುದು. ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲಾಗುವುದು ಎಂದು ಹೇಳಿದರು.
ಸೂಳೆಕೆರೆ ನೀರಿನ ಮಾದರಿಯ ಪರೀಕ್ಷಾ ವರದಿ ಪ್ರಯೋಗಾಲಯದಿಂದ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಕೆರೆಗೆ ಸೇರಿಕೊಳ್ಳುತ್ತಿರುವ ತ್ಯಾಜ್ಯವನ್ನು ತಡೆಗಟ್ಟಲಾಗುವುದು ಅಥವಾ ಸಂಸ್ಕರಣೆ ಮಾಡಲಾಗುವುದು. ಪಾಂಡೋಮಟ್ಟಿ ಶ್ರೀಗಳು ಈ ಕುರಿತು ತಮ್ಮೊಂದಿಗೆ ಮಾತನಾಡಿದ್ದಾರೆ. ಅಧಿಕಾರಿಗಳು ಇದಕ್ಕೆ ಶೀಘ್ರವೇ ಪರಿಹಾರ ಹುಡುಕುತ್ತಾರೆ ಎಂದು ತಿಳಿಸಿದರು.
ದಾವಣಗೆರೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕಾದರೆ ಕೇಂದ್ರ ಸರ್ಕಾರದ ಕೆಲವು ನಿಯಮಗಳಿವೆ. ಮುಂದಿನ ವಾರ ನಡೆಯುವ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕಳೆದ ವಾರ ಒಂದು ವಿದ್ಯುತ್ ಉತ್ಪಾದನಾ ಘಟಕ ಕೈಕೊಟ್ಟಿದ್ದರಿಂದ ಸಮಸ್ಯೆಯಾಗಿತ್ತು, ಈಗ ಅದನ್ನು ಸರಿಪಡಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್ ವರ್ಗಾವಣೆಗೆ ಯಾವುದೇ ಶಾಸಕರೂ ಒತ್ತಡ ಹೇರಿಲ್ಲ, ಅಂಥದಕ್ಕೆಲ್ಲ ತಾವು ಮಣಿಯುವುದೂ ಇಲ್ಲ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಜಿ.ಪಂ. ಸಿಇಒ ಸುರೇಶ ಇಟ್ನಾಳ್, ಎಸ್ಪಿ ಡಾ.ಕೆ. ಅರುಣ್ ಇದ್ದರು.