ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ರಾಜಕೀಯ ಪ್ರೇರಿತ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ. ನಲವತ್ತು ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಕಳಂಕ ರಹಿತ ವ್ಯಕ್ತಿತ್ವ ಹೊಂದಿದ್ದಾರೆ. ಅವರನ್ನು ರಾಜಕೀಯವಾಗಿ ಕುಗ್ಗಿಸುವ ಪ್ರಯತ್ನ ಫಲ ನೀಡುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ದೂರು ಆಧರಿಸಿ ರಾಜ್ಯಪಾಲರು ನೀಡಿದ ನೋಟಿಸ್ ಅನ್ನು ವಾಪಸ್ ಪಡೆಯುವಂತೆ ಈ ಹಿಂದೆಯೇ ಸಂಪುಟ ಸಭೆ ನಿರ್ಣಯ ಕೈಗೊಂಡಿತ್ತು. ಅದರ ಪ್ರತಿಯನ್ನು ರಾಜಭವನಕ್ಕೆ ರವಾನಿಸಲಾಗಿತ್ತು. ಆದಾಗ್ಯೂ ತನಿಖೆಗೆ ಆದೇಶಿಸಿರುವುದು ಅಚ್ಚರಿ ತಂದಿದೆ. ಇಡೀ ಕಾಂಗ್ರೆಸ್ ಪಕ್ಷ ಸಿಎಂ ಸಿದ್ದರಾಮಯ್ಯ ಪರವಾಗಿದೆ. ಕಾನೂನು ಹೋರಾಟ ಮಾಡಲಾಗುವುದು ಎಂದರು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಜಭವನವನ್ನು ತಮ್ಮ ಕಚೇರಿಯನ್ನಾಗಿ ಬಳಸಿಕೊಳ್ಳುವುದು ಸರಿಯಲ್ಲ. ಉತ್ತರದ ಕೆಲ ರಾಜ್ಯಗಳಲ್ಲೂ ಕೂಡಾ ಬಿಜೆಪಿ ಚುನಾಯಿತ ಸರ್ಕಾರಗಳಿಗೆ ತೊಂದರೆ ನೀಡಿದ ಉದಾಹರಣೆಗಳಿವೆ. ಕರ್ನಾಟಕದಲ್ಲೂ ಆ ಪ್ರಯತ್ನ ನಡೆದಿದೆ. ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.