ಜಿಲ್ಲೆ

ದಾವಣಗೆರೆಯಲ್ಲಿ ಬಿಜೆಪಿ ದುರಾಡಳಿತ ಅಂತ್ಯ

ರಮೇಶ ಜಹಗೀರದಾರ್

ದಾವಣಗೆರೆ : ದಾವಣಗೆರೆ ನಗರ ಮತ್ತು ಜಿಲ್ಲೆಯಲ್ಲಿ ಬಿಜೆಪಿಯವರ ದುರಾಡಳಿತ ಕಳೆದ ವರ್ಷದಿಂದ ಅಂತ್ಯಗೊಳ್ಳುತ್ತಾ ಬಂದಿದ್ದು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.  ನಗರದ 16, 38, 30, 41 ಮತ್ತು 31 ನೇ ವಾರ್ಡ್‌ಗಳಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.  ಜಿಲ್ಲೆಯ ಜನರು ಬಿಜೆಪಿಯವರ ದುರಾಡಳಿತವನ್ನು ಸಹಿಸಲಾಗದೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಕಾಂಗ್ರೆಸ್ ಈ ಹಿಂದೆ ನೀಡಿದ ಭರವಸೆಯಂತೆ ನಡೆದುಕೊಂಡು ಬರುತ್ತಿದೆ. ಬಿಜೆಪಿಯವರು ಮಾಡಿರುವ ಎಲ್ಲ ಅಕ್ರಮಗಳನ್ನು ಬಯಲು ಮಾಡುವುದಾಗಿ ತಿಳಿಸಿದರು.  ಕಳೆದ ಐದು ವರ್ಷದಲ್ಲಿ ಬಿಜೆಪಿಯವರು ಉತ್ತಮ ರಸ್ತೆಗಳನ್ನು ಹಾಳು ಮಾಡಿದರು. ನಾವು ಅವುಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಪ್ರಮುಖ ರಸ್ತೆಗಳ ಆಧುನೀಕರಣಕ್ಕೆ ಚಾಲನೆ ನೀಡಲಾಗಿದ್ದು ಇನ್ನಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.  ಬಿಜೆಪಿಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಪಕ್ಷದಲ್ಲಿ ಬಿದ್ದಿರುವ ಹೆಗ್ಗಣಗಳನ್ನು ನೋಡದೆ ಬೇರೆ ಪಕ್ಷಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಅವರು, ಸಮಯ ಬಂದಾಗ ಪಾಠ ಕಲಿಸುತ್ತೇನೆ ಎಂದು ಎಚ್ಚರಿಸಿದರು.  ಇದೇ ವೇಳೆ ಆಯಾ ಭಾಗದ ನಾಗರಿಕರು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದಾಗ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು.  ಮಹಾನಗರ ಪಾಲಿಕೆಯ ಸದಸ್ಯ ಎ.ನಾಗರಾಜ್ ಮಾತನಾಡಿ, ಈ ಹಿಂದೆ 25 ವರ್ಷಗಳ ಕಾಲ ಸಂಸದರು ಒಂದು ದಿನವೂ ಅಧಿವೇಶನದಲ್ಲಿ ಮಾತನಾಡಲಿಲ್ಲ. ಕಳೆದ ಒಂದು ತಿಂಗಳಲ್ಲಿ ನೂತನ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ದಾವಣಗೆರೆ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿ ಆದಷ್ಟು ಶೀಘ್ರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದ್ದಾರೆ ಎಂದರು.  ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮೇಯರ್ ವಿನಾಯಕ ಪೈಲ್ವಾನ್, ಆಯುಕ್ತೆ ರೇಣುಕಾ, ಸದಸ್ಯರಾದ ಮೀನಾಕ್ಷಿ ಜಗದೀಶ್, ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಜಯಮ್ಮ ಗೋಪಿ ನಾಯ್ಕ, ಪಾಮೇನಹಳ್ಳಿ ನಾಗರಾಜ್, ಕೆ.ಬಿ. ರುದ್ರೇಶ್ ಇದ್ದರು.