ದಾವಣಗೆರೆ : ಮೈಕ್ರೋ ಫೈನಾನ್ಸ್‌ಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮಗಳ ಚೌಕಟ್ಟು ಮೀರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಎಚ್ಚರಿಕೆ ನೀಡಿದರು. ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಗುರುವಾರ ಮೈಕ್ರೋ ಫೈನಾನ್ಸ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು. ಆರ್‌ಬಿಐನ ನಿಯಮಗಳನ್ನು ಒಂದೊಂದಾಗಿ ಪ್ರಸ್ತಾಪಿಸಿದ ಡಿಸಿ, ಅವುಗಳ ಉಲ್ಲಂಘನೆ ಮಾಡುತ್ತಿರುವ ಸಂಸ್ಥೆಗಳ ವಿರುದ್ಧ ಹರಿಹಾಯ್ದರು. ಜನಸಾಮಾನ್ಯರಿಗೆ ತೊಂದರೆ ಕೊಟ್ಟರೆ ಸುಮ್ಮನಿರುವುದಿಲ್ಲ ಎಂಬ ಸಂದೇಶ ರವಾನಿಸಿದರು. ಸಾಲ ವಸೂಲಾತಿಗೆ ಹೋಗಿ ಹೆದರಿಸುವುದು, ಗೂಂಡಾಗಳನ್ನು ಕಳಿಸುವುದು, ಅವಾಚ್ಯ ಶಬ್ದ ಬಳಸುವುದು ಕಂಡುಬಂದಿದೆ. ಈ ವರ್ತನೆ ಸರಿಪಡಿಸಿಕೊಳ್ಳದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಗುಡುಗಿದರು. ಮೈಕ್ರೋ ಫೈನಾನ್ಸ್‌ಗಳಿಗೆ ಜನರಿಂದ ಠೇವಣಿ ಸಂಗ್ರಹಿಸುವ ಅಧಿಕಾರವಿಲ್ಲ. ಸಾಲ ಪಡೆದವರಿಗೆ ಫ್ಯಾಕ್ಟ್‌ಶೀಟ್ ಒದಗಿಸಬೇಕು. ಸಂಜೆ 6ರ ನಂತರ ಸಾಲ ವಸೂಲಾತಿಗೆ ಹೋಗುವಂತಿಲ್ಲ. ಸಾಲ ಕೊಡುವ ಮಿತಿ 2 ಲಕ್ಷ ರೂ. ವರೆಗೆ ಮಾತ್ರವಿದೆ, ಅದಕ್ಕಿಂತ ಹೆಚ್ಚು ನೀಡಿರುವುದು ನಮ್ಮ ಗಮನದಲ್ಲಿದೆ. ಗ್ರಾಹಕರ ಸಾಮರ್ಥ್ಯಕ್ಕೆ ತಕ್ಕಂತೆ ಸಾಲ ಮಂಜೂರು ಮಾಡಬೇಕು ಎಂದು ತಿಳಿಸಿದರು. ಬಡ್ಡಿಯ ದರ ಎಷ್ಟು ಎಂಬುದನ್ನು ಗ್ರಾಹಕರಿಗೆ ತಿಳಿಸಬೇಕು. ಕನ್ನಡದಲ್ಲಿ ವ್ಯವಹಾರ ಇರಬೇಕು. ಮರುಪಾವತಿ ವಿಳಂಬವಾದರೆ ದಂಡ ವಿಧಿಸುವ ಅಧಿಕಾರ ನಿಮಗಿಲ್ಲ. ಗ್ರಾಹಕರಿಂದ ಆಧಾರ್ ಕಾರ್ಡ್ ಪಡೆಯುವುದು ಕಡ್ಡಾಯವಲ್ಲ. ನೀವು ಅಕ್ರಮ ದಾಖಲೆಗಳನ್ನು ಪಡೆಯುತ್ತಿದ್ದೀರಿ. ಇದೇ ರೀತಿಯ ವರ್ತನೆ ಮುಂದುವರಿದರೆ ಈ ವ್ಯವಸ್ಥೆ ಕುಸಿಯುತ್ತದೆ. ನಾವು ಅದನ್ನು ಬಯಸುವುದಿಲ್ಲ ಎಂದರು. ಸಾಲ ವಸೂಲಾತಿಗೆ ಹೆದರಿ ಅನೇಕರು ಮನೆ ಬಿಟ್ಟಿದ್ದಾರೆ, ನಾಪತ್ತೆಯಾಗಿದ್ದಾರೆ. ಜಗಳೂರು, ಮಾಯಕೊಂಡ, ಹೊನ್ನಾಳಿಯ ಜನರು ನನಗೆ ದೂರು ನೀಡಿದ್ದಾರೆ. ಇದು ಪುನರಾವರ್ತನೆಯಾದರೆ ಸುಮ್ಮನಿರುವುದಿಲ್ಲ. ಅಂಥವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಸದ್ಯದಲ್ಲೇ ಸಹಾಯವಾಣಿ ಸ್ಥಾಪಿಸಲಾಗುವುದು ಎಂದು ತಿಳಿಸಿದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಸಿದ್ದಾರ್ಥ ಆಚಾರ್ಯ ಮಾತನಾಡಿದರು. ಗ್ರಾಮಾಂತರ ಡಿವೈಎಸ್ಪಿ ಬಸವರಾಜ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಎಸ್‌ಪಿ ಸ್ಯಾಮ್ ವರ್ಗೀಸ್ ಇದ್ದರು. ಪೊಲೀಸ್ ಇನ್‌ಸ್ಪೆಕ್ಟರ್ ಲಕ್ಷ್ಮಣ ನಾಯ್ಕ ನಿರೂಪಿಸಿದರು. ... (ಬಾಕ್ಸ್) ಮಾನವೀಯತೆ ಮರೆಯದಿರಿ ಮೈಕ್ರೋ ಫೈನಾನ್ಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರ ಬಗ್ಗೆ ಮಾನವೀಯತೆಯಿಂದ ವರ್ತಿಸಬೇಕು. ದೌರ್ಜನ್ಯ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಎಚ್ಚರಿಕೆ ನೀಡಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ಪ್ರಕರಣಗಳಾಗಿವೆ. ನಮ್ಮ ಜಿಲ್ಲೆಯಲ್ಲಿ ಅದಕ್ಕೆ ಅವಕಾಶ ನೀಡುವುದಿಲ್ಲ. ಸಾಲ ಮರುಪಾವತಿ ಏಜೆಂಟರು ರೌಡಿಗಳಂತೆ ವರ್ತಿಸುವುದು ಕಂಡುಬಂದಿದೆ. ಸೌಜನ್ಯದ ವರ್ತನೆ ಇರಬೇಕು. ಆತ್ಮಹತ್ಯೆಗೆ ಪ್ರಚೋದಿಸಿದರೆ, ಜನರಿಗೆ ಅವಮಾನ ಮಾಡಿದರೆ ಕಾನೂನು ಕ್ರಮ ತಪ್ಪುವುದಿಲ್ಲ ಎಂದರು. ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸಭೆಯಾಗಿದೆ. ಶೀಘ್ರವೇ ಸುಗ್ರೀವಾಜ್ಞೆ ಹೊರಡಲಿದೆ. ಜಿಲ್ಲೆಯಲ್ಲಿ ಪೊಲೀಸ್ ಠಾಣೆ, ಉಪ ವಿಭಾಗ ಮಟ್ಟದಲ್ಲಿ ಸಭೆಗಳನ್ನು ಮಾಡಲಾಗುತ್ತಿದೆ. ಜನರಿಗೆ ಕಿರುಕುಳ ಆದರೆ ಸಹಿಸುವುದಿಲ್ಲ ಎಂದು ಹೇಳಿದರು. ಜಿಲ್ಲೆಯಲ್ಲಿ 26 ಮೈಕ್ರೋ ಫೈನಾನ್ಸ್‌ಗಳಿವೆ. ಅವುಗಳಲ್ಲಿ 4.60 ಲಕ್ಷ ಖಾತೆಗಳಿದ್ದು 2570 ಕೋಟಿ ರೂ. ವ್ಯವಹಾರ ಆಗುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಬಲೀಕರಣದ ಸದುದ್ದೇಶದಿಂದ ಕೆಲಸ ಮಾಡಿ ಎಂದು ತಿಳಿಸಿದರು.