ದಾವಣಗೆರೆ : ಬೆಂಗಳೂರು ನಗರದ ಪೊಲೀಸ್ ಕಮಿಷನರ್ ದಯಾನಂದ್ ಅವರನ್ನು ರಾಜ್ಯ ಸರ್ಕಾರ ವಿನಾಕಾರಣ ಅಮಾನತು ಮಾಡಿದೆ. ಅವರನ್ನು ಅದೇ ಹುದ್ದೆಗೆ ಮರುನೇಮಕ ಮಾಡಬೇಕು ಎಂದು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ಆಗ್ರಹಿಸಿದೆ. ಈ ಕುರಿತು ಬುಧವಾರ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ. ವೀರಣ್ಣ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ವಾಲ್ಮೀಕಿ ನಾಯಕ ಜನಾಂಗದ ಐ.ಪಿ.ಎಸ್. ಅಧಿಕಾರಿ ಜಿ. ದಯಾನಂದ್ ಕರ್ನಾಟಕ ಕಂಡ ದಕ್ಷ, ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಇದುವರೆಗೂ ಅವರ ಮೇಲೆ ಯಾವುದೇ ಗುರುತರವಾದ ಆರೋಪಗಳಿಲ್ಲ. ಬೆಂಗಳೂರು ಮಹಾನಗರದ ಕಾನೂನು, ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದಾರೆ. ಶೋಷಿತ ಸಮುದಾಯದ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕಳಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ. ದಯಾನಂದ್ ಅವರನ್ನು ವಿನಾಕಾರಣ ಅಮಾನತು ಮಾಡಿರುವುದು ಶೋಷಿತರ, ಹಿಂದುಳಿದ ನಾಯಕ ಜನಾಂಗಕ್ಕೆ ಮಾಡಿದ ಅವಮಾನವಾಗಿದೆ. ಅಮಾನತು ಆದೇಶವನ್ನು ರದ್ದುಪಡಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಸಮಾಜದ ಪ್ರಧಾನ ಕಾರ್ಯದರ್ಶಿ ಶ್ಯಾಗಲೆ ಕೆ.ಆರ್.ಮಂಜುನಾಥ್, ಉಪಾಧ್ಯಕ್ಷರಾದ ಎನ್.ಎಂ. ಆಂಜನೇಯ ಗುರೂಜಿ, ಆರ್. ಸಿರಿಗೆರೆ ರಂಗಪ್ಪ, ದೇವರಬೆಳಕೆರೆ ಪೈಲ್ವಾನ್ ಮಹೇಶ್ವರಪ್ಪ, ಹರಿಹರ ಕರಿಬಸಪ್ಪ, ಸುರೇಶ್ ಬಾಬು ಇದ್ದರು.