ಜಿಲ್ಲೆ

ಜಾತಿ ಪ್ರಮಾಣ ಪತ್ರದಲ್ಲಿ 'ಮಾದಿಗ' ಎಂದು ನಮೂದಿಸಿ

ರಮೇಶ ಜಹಗೀರದಾರ್

ದಾವಣಗೆರೆ : ಜಾತಿ ಪ್ರಮಾಣ ಪತ್ರದಲ್ಲಿ ಮಾದಿಗ ಎಂದು ನಮೂದಿಸುವುದು ಸೇರಿ ಪ.ಜಾತಿ ಜನಾಂಗದವರ ಅಭಿವೃದ್ಧಿಗೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಮಾದಿಗ ದಂಡೋರ ಜಿಲ್ಲಾ ಸಮಿತಿ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.  ಪ. ಜಾತಿಯಲ್ಲಿ ಮಾದಿಗ ಎಂಬ ಉಪಜಾತಿ ಇದ್ದು, ಮಾದಿಗ ಎಂದು ನಮೂದಿಸಿ ಜಾತಿ ಪ್ರಮಾಣಪತ್ರ ನೀಡುವಂತೆ ಹಾಗೂ ಹರಿಜನ ಅಥವಾ ಆದಿ ಕರ್ನಾಟಕ ಎಂಬ ಪದ ತೆಗೆದು ಹಾಕುವಂತೆ ಎಲ್ಲ ತಹಸೀಲ್ದಾರ್‌ಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.  ಜಿಲ್ಲೆಯಾದ್ಯಂತ ಗ್ರಾಪಂ ವ್ಯಾಪ್ತಿಗಳಲ್ಲಿ ಪ. ಜಾತಿಯ ಮಾದಿಗ ಜನಾಂಗದವರು ಪ್ರತ್ಯೇಕವಾಗಿ ಸರ್ಕಾರದ ಭೂಮಿಗಳಲ್ಲಿ ಮನೆ ಕಟ್ಟಿಕೊಂಡು ಹಲವಾರು ವರ್ಷಗಳಿಂದ ವಾಸ ಮಾಡುತ್ತಿದ್ದು, ಹಕ್ಕುಪತ್ರ ಪಡೆದುಕೊಳ್ಳಲು ಆನ್‌ಲೈನ್‌ನಲ್ಲಿ 94(ಸಿ) ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.  ಗ್ರಾಪಂ ವ್ಯಾಪ್ತಿಗಳಲ್ಲಿ ಪ. ಜಾತಿ ಜನಾಂಗದವರಿಗೆ ಪ್ರತ್ಯೇಕ ಸ್ಮಶಾನ ಭೂಮಿ ಮಂಜೂರಾಗಿದ್ದು, ತಹಸೀಲ್ದಾರ್ ಅವರಿಂದ ಪಹಣಿ ಬೇರ್ಪಡಿಸಿ ಗ್ರಾಪಂಗಳಿಗೆ ಹಸ್ತಾಂತರಿಸಿ, ಭೂಮಿಯ ಗಡಿ ಗುರುತಿಸಿ ಹದ್ದುಬಸ್ತು ಮಾಡಿಸಬೇಕು. ಕಾಂಪೌಂಡ್ ನಿಮಿರ್ಸಿ ಮೂಲಸೌಕರ್ಯ ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಪಂ ಇಲಾಖೆಗೆ ನಿರ್ದೇಶೀಸಬೇಕು ಎಂದು ಒತ್ತಾಯಿಸಿದರು.  ಜಿಲ್ಲೆಯ ವಿವಿಧ ಹಳ್ಳಿಗಳ ಖಾಸಗಿ ಜಮೀನುಗಳಲ್ಲಿ ಪ. ಜಾತಿಯ ಮಾದಿಗ ಜನಾಂಗದವರು ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮ ಅಥವಾ ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಬೇಕು.  ವಿವಿಧ ಇಲಾಖೆಗಳಲ್ಲಿ ಪ. ಜಾತಿ ಅಭಿವೃದ್ಧಿಗೆ ಸರ್ಕಾರದಿಂದ ಮೀಸಲಿಟ್ಟ ಹಣ ಬೇರೆ ಕೆಲಸಗಳಿಗೆ ಬಳಕೆ ಮಾಡುತ್ತಿರುವುದನ್ನು ತಡೆ ಹಿಡಿದು ಪರಿಶಿಷ್ಟರ ಅಭಿವೃದ್ಧಿಗೆ ಹಣ ವಿನಿಯೋಗಿಸುವಂತೆ ವಿವಿಧ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಆಗ್ರಹಿಸಿದರು.  ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಕುಬೇರಪ್ಪ ಗೌರಿಪುರ, ಪ್ರಧಾನ ಕಾರ್ಯದರ್ಶಿ ಎಂ.ಎಚ್. ಮಂಜಪ್ಪ ಕೆಂಚಿಕೊಪ್ಪ, ನ್ಯಾಮತಿ ತಾಲೂಕು ಪ್ರಧಾನ ಕಾರ್ಯದರ್ಶಿ ಎ.ಕೆ. ನರಸಿಂಹಪ್ಪ ಗೋವಿನ ಕೋವಿ, ಹೊನ್ನಾಳಿ ತಾಲೂಕು ಪ್ರಧಾನ ಕಾರ್ಯದರ್ಶಿ ಹರೀಶ್ ಗೋಣಿಗೆರೆ, ಬಹುಜನ ಸೇವಾ ಸಂಘ ಜಿಲ್ಲಾಧ್ಯಕ್ಷ ಎಂ. ಆಂಜನೇಯ, ಶೇಖರ್ ಟಿ. ಕಾಟಿಹಳ್ಳಿ, ಹನುಮಂತಪ್ಪ ಇಂಡಸಘಟ್ಟ ಇತರರು ಇದ್ದರು.