ಜಿಲ್ಲೆ

ರಿಂಗ್ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ರಮೇಶ ಜಹಗೀರದಾರ್

ದಾವಣಗೆರೆ : ನಗರದಲ್ಲಿ ನಡೆಯುತ್ತಿರುವ ರಿಂಗ್ ರಸ್ತೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವ ಮೂಲಕ ವಾಹನ ದಟ್ಟಣೆಯನ್ನು ತಗ್ಗಿಸಲು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಸೂಚನೆ  ನೀಡಿದರು.
 ಮಂಗಳವಾರ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಹೆಗಡೆ ನಗರದ ರಿಂಗ್ ರಸ್ತೆಯನ್ನು ಬೇತೂರು ರಸ್ತೆಗೆ ಸಂಪರ್ಕಿಸಲು ಈಗಾಗಲೇ ತೆರವು ಕಾರ್ಯ ಮಾಡಿದ್ದು ಆದಷ್ಟು ಬೇಗ ಕೆಲಸ ಮುಕ್ತಾಯಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇದರಿಂದ ವಾಹನಗಳ ದಟ್ಟಣೆ ಜತೆಗೆ ಮಾಲಿನ್ಯವೂ ಕಡಿಮೆಯಾಗಲಿದೆ ಎಂದು ತಿಳಿಸಿದರು.
 ಹೆಗಡೆ ನಗರದ ಮೂಲಕ ಬೇತೂರು ರಸ್ತೆಯಿಂದ ಆವರಗೆರೆ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಈ ವರ್ತುಲ ರಸ್ತೆಯನ್ನು ವೈಜ್ಞಾನಿಕವಾಗಿ ಮಾಡಬೇಕು. ಈ ಭಾಗದಲ್ಲಿ ಯಾರಿಗೂ ತೊಂದರೆಯಾಗದಂತೆ ಹಳ್ಳಕ್ಕೆ ಸ್ಥಳ ಬಿಟ್ಟು ರಸ್ತೆ ನಿರ್ಮಾಣ ಮಾಡಲು ಯೋಜನೆ ರೂಪಿಸಬೇಕು ಎಂದು ತಾಕೀತು ಮಾಡಿದರು.
 ನಗರದ ಮಾಸ್ಟರ್ ಪ್ಲಾೃನ್ ಅನ್ನು ಜನಸಾಮಾನ್ಯರಿಗೆ, ರೈತರಿಗೆ ಅನುಕೂಲ ಆಗುವಂತೆ ಇನ್ನಷ್ಟು ಪರಿಷ್ಕರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಿದರು. ಪ್ರಾಧಿಕಾರದಿಂದ ಒಟ್ಟು 23 ವಿಷಯಗಳ ಕುರಿತು ಚರ್ಚಿಸಲಾಗಿದ್ದು ಕೆಲವು ಮಾರ್ಪಾಡಿನೊಂದಿಗೆ ಅನುಮೋದನೆಯನ್ನು ನೀಡಲಾಯಿತು.
 ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಹೆಚ್ಚುವರಿ ಎಸ್ಪಿ ವಿಜಯ ಕುಮಾರ್ ಎಂ. ಸಂತೋಷ್, ಪ್ರಾಧಿಕಾರದ ಆಯುಕ್ತ ಬಸವನಗೌಡ ಕೋಟೂರ, ಪಾಲಿಕೆ ಆಯುಕ್ತೆ ರೇಣುಕಾ ಇದ್ದರು.