ದಾವಣಗೆರೆ: ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಗೆ ದರ ನಿಗದಿಪಡಿಸಿದ್ದು, ಡಿ.1 ರಿಂದ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ರಾಗಿ ಬೆಂಬಲ ಬೆಲೆ ಕುರಿತ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ರಾಗಿಯನ್ನು ಖರೀದಿ ಮಾಡಲಾಗುತ್ತಿದ್ದು, ರಾಗಿಗೆ 3,846 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ 8 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಅನುಮತಿ ನೀಡಲಾಗಿದ್ದು, ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್ ರಾಗಿ ಖರೀದಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲ ತಾಲೂಕುಗಳ ಎಪಿಎಂಸಿಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗುವುದು. ರೈತರು ತಮ್ಮ ರಾಗಿ ಮಾರಾಟ ಮಾಡಲು ನೋಂದಾಯಿಸಬಹುದು. ಜ.1 ರಿಂದ ಮಾ.31 ರವರೆಗೆ ಖರೀದಿ ಕಾರ್ಯ ಕೈಗೊಳ್ಳಲಾಗುತ್ತದೆ. ಖರೀದಿ ಕೇಂದ್ರಗಳಲ್ಲಿ ಜನಜಂಗುಳಿ ಹೆಚ್ಚಾದರೆ ಮತ್ತೊಂದು ಕೇಂದ್ರ ತೆರೆಯಲು ಅವಕಾಶ ನೀಡಲಾಗುವುದು ಎಂದರು.
ರೈತರು ಸರ್ಕಾರದ ಸೌಲಭ್ಯ ಹಾಗೂ ಇನ್‌ಪುಟ್ ಸಬ್ಸಿಡಿ ಪಡೆಯಲು ತಮ್ಮ ಜಮೀನುಗಳ ಸಂಪೂರ್ಣ ಮಾಹಿತಿಯನ್ನು ಎಫ್‌ಐಡಿಯಲ್ಲಿ ಸೇರ್ಪಡೆಗೊಳಿಸಬೇಕು. ಎಫ್‌ಐಡಿ ನೋಂದಾಯಿಸುವಾಗ ಯಾವುದೇ ಸುಳ್ಳು ಮಾಹಿತಿಗೆ ಅವಕಾಶ ನೀಡಬಾರದು. ಜಗಳೂರು ಖರೀದಿ ಕೇಂದ್ರದಲ್ಲಿ ಪ್ರತಿ ಬಾರಿ ಸಮಸ್ಯೆಗಳಾಗುತ್ತಿದ್ದು, ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ರೈತರು ಅನ್ಯ ವ್ಯಕ್ತಿಗಳಿಗೆ ಅವಕಾಶ ನೀಡದೆ ತಾವೇ ನೇರವಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬೇಕು. ಎಲ್ಲ ಖರೀದಿ ಕೇಂದ್ರಗಳಲ್ಲೂ ತಾತ್ಕಾಲಿಕ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಶಿದ್ರಾಮ್ ಮಾರಿಹಾಳ್, ತಹಸೀಲ್ದಾರ್ ಡಾ.ಎಂ.ಬಿ.ಅಶ್ವತ್ಥ ಇದ್ದರು.