ದಾವಣಗೆರೆ : ದಾವಣಗೆರೆ-ಹರಿಹರ ಮಾರ್ಗದಲ್ಲಿ ಬರುವ ಅಮರಾವತಿ ಬಳಿ 20 ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಿಸಲು ಮಂಗಳವಾರ ನಡೆದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಯಿತು. ಬಡಾವಣೆ ನಿರ್ಮಾಣಕ್ಕೆ ಬೇಕಾದ 20 ಎಕರೆ ಜಮೀನನ್ನು ನೇರ ಖರೀದಿಗೆ ನೀಡಲು ರೈತರೊಬ್ಬರು ಮುಂದೆ ಬಂದಿದ್ದಾರೆ. ಸರ್ಕಾರದ ಅನುಮತಿ ಪಡೆದು ಮುಂದಿನ ಪ್ರಕ್ರಿಯೆ ಕೈಗೊಳ್ಳಲು ನಿರ್ಧರಿಸಲಾಯಿತು. ನಗರದ ಸಿಡಿಪಿ (ಮಾಸ್ಟರ್ ಪ್ಲಾೃನ್) ಸಿದ್ಧವಿದೆ. ಸಾರ್ವಜನಿಕರಿಂದ 1200 ಆಕ್ಷೇಪಣೆಗಳು ಬಂದಿವೆ. 15 ದಿನಗಳಲ್ಲಿ ಸರ್ಕಾರಕ್ಕೆ ಕಳಿಸಿ ಂತಿಮ ಒಪ್ಪಿಗೆ ಪಡೆಯುವಂತೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಸೂಚಿಸಿದರು. ಇತ್ತೀಚೆಗೆ ನಗರದ ಎಸ್‌ಒಜಿ ಕಾಲನಿಯಲ್ಲಿ ಅಧಿಕಾರಿಗಳು 30 ಮನೆಗಳನ್ನು ತೆರವುಗೊಳಿಸಿದ್ದರು. ಮನೆ ಕಳೆದುಕೊಂಡವರಿಗೆ ಅದೇ ಕಾಲನಿಯಲ್ಲಿ ಪರ್ಯಾಯ ನಿವೇಶನಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಸಚಿವರು ನಿರ್ದೇಶನ ನೀಡಿದರು. ಹರಿಹರ ಶಾಸಕ ಬಿ.ಪಿ. ಹರೀಶ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಆಯುಕ್ತ ಹುಲ್ಮನಿ ತಿಮ್ಮಣ್ಣ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಇನ್ನಿತರ ಅಧಿಕಾರಿಗಳು ಸಭೆಯಲ್ಲಿದ್ದರು. ಸಭೆಯ ನಂತರ ಸಾರ್ವಜನಿಕರು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿಯಾಗಿ ನಿವೇಶನ, ಡೋರ್ ನಂಬರ್, ರಸ್ತೆ, ಹಳ್ಳ ಸೇರಿದಂತೆ ವಿವಿಧ ಇಲಾಖೆಗೆ ಸಂಬಂಧಿಸಿದ ಅಹವಾಲುಗಳನ್ನು ಸಲ್ಲಿಸಿದರು.