ದಾವಣಗೆರೆ : ನಗರದಲ್ಲಿ ಚರ್ಮರೋಗ ಚಿಕಿತ್ಸಾ ಕೇಂದ್ರಗಳನ್ನು ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ತೆರೆದು ಜನರಿಗೆ ಚಿಕಿತ್ಸೆ ನೀಡುತ್ತಿರುವ ಕೇಂದ್ರಗಳನ್ನು ಮುಚ್ಚಿಸಿ, ಒಂದು ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು. ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಕೆ.ಪಿ.ಎಂ.ಇ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಸಮಿತಿ ಸಭೆಯಲ್ಲಿ ಮಾತನಾಡಿ, ಅನಧಿಕೃತ ಚರ್ಮರೋಗ ಚಿಕಿತ್ಸಾ ಕೇಂದ್ರಗಳನ್ನು ತೆರೆದರೆ ಅಂತಹ ಕ್ಲಿನಿಕ್‌ಗಳ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ನಗರದಲ್ಲಿ ಒಟ್ಟು 15 ಚರ್ಮರೋಗ ಚಿಕಿತ್ಸಾ ಕೇಂದ್ರಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ 15 ತಂಡಗಳು ಏಕಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿವೆ. ಅದರ ಅನ್ವಯ ದಾವಣಗೆರೆಯ ರಾಮ್ ಆ್ಯಂಡ್ ಕೋ ಸರ್ಕಲ್ ಬಳಿ ಇರುವ ವಿ-ಕೇರ್ ಹೇರ್ ಆ್ಯಂಡ್ ಸ್ಕಿನ್ ಕ್ಲಿನಿಕ್, ಶಾಮನೂರು ರಸ್ತೆಯಲ್ಲಿರುವ ಹೇರ್ ಒ ಕ್ರಾಪ್ಟ್ೃ, ಯಲ್ಲಮ್ಮ ನಗರದಲ್ಲಿರುವ ಕಾಸ್ಮೋ ಅಸ್ತೇಟಿಕ್ ಆ್ಯಂಡ್ ಸ್ಕಿನ್ ಕೇರ್ ಕ್ಲಿನಿಕ್, ಕೆ.ಪಿ.ಎಂ.ಇ ಅಡಿಯಲ್ಲಿ ಅನುಮತಿ ಪಡೆಯದೇ ಚಿಕಿತ್ಸೆ ನೀಡುತ್ತಿದ್ದು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಿಸಲಾಗಿದೆ ಮತ್ತು ಎಫ್.ಐ.ಆರ್ ದಾಖಲಿಸಿ ಕೆ.ಪಿ.ಎಂ.ಇ ರಿಡ್ರೆಸಲ್ ಕಮಿಟಿಗೆ ಸಲ್ಲಿಸಲಾಗಿದೆ ಎಂದರು. ರಾಂ ಆ್ಯಂಡ್ ಕೋ ಸರ್ಕಲ್ ಬಳಿ ಇರುವ ಕಾಸ್ಮೋ ಡರ್ಮ ಹೇರ್ ಆ್ಯಂಡ್ ಸ್ಕಿನ್ ವೆಲ್ನೆಸ್ ಸೆಂಟರ್ ಬ್ಯೂಟಿ ಪಾರ್ಲರ್ ಆಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಕೂದಲು ಕಸಿ ಚಿಕಿತ್ಸೆ ನೀಡುವುದಾಗಿ ನಾಮಫಲಕವನ್ನು ಹಾಕಿದ್ದು ಕೂದಲು ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಿಲ್ಲ. ಆದ್ದರಿಂದ ನಾಮಫಲಕವನ್ನು ತೆರವುಗೊಳಿಸಿ ಚರ್ಮ ಚಿಕಿತ್ಸೆಯ ಉಪಕರಣವನ್ನು ಡಿ ಕಮಿಷನ್ ಮಾಡಿಸಲಾಯಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ತಿಳಿಸಿದರು. ನಾಮಫಲಕ ತೆರವುಗೊಳಿಸಿ ಒಂದು ಲಕ್ಷ ರೂ. ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಎಂ.ಸಿ.ಸಿ ‘ಎ’ ಬ್ಲಾಕ್‌ನಲ್ಲಿರುವ ಇಶಾ ಹೇರ್ ಆ್ಯಂಡ್ ಸ್ಕಿನ್ ಕ್ಲಿನಿಕ್, ರಾಂ ಆ್ಯಂಡ್ ಕೋ ಸರ್ಕಲ್ನಲ್ಲಿರುವ ಓಂ ಡೆಂಟಲ್ ಕೇರ್, ಎಂ.ಸಿ.ಸಿ ‘ಬಿ’ ಬ್ಲಾಕ್‌ನಲ್ಲಿರುವ ಲಾ ಪೇಟಲ್ಸ್ ಅಸ್ತೇಟಿಕ್ ಕ್ಲಿನಿಕ್, ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿರುವ ರಿಧಿ ದಂತ ಚಿಕಿತ್ಸಾಲಯ ಮತ್ತು ಮಾಮಾಸ್ ಜಾಯಿಂಟ್ ರಸ್ತೆಯಲ್ಲಿರುವ ಗ್ಲೋ ಡೆಂಟಲ್ ಆ್ಯಂಡ್ ಫೇಶಿಯಲ್ ಅಸ್ಥೆಟಿಕ್ ಸೆಂಟರ್‌ಗಳು ದಂತ ಚಿಕಿತ್ಸೆಗಾಗಿ ಲೈಸೆನ್ಸ್ ಪಡೆದು, ಚರ್ಮ ಚಿಕಿತ್ಸಾ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿರುತ್ತವೆ ಎಂದು ಡಿಎಚ್‌ಒ ತಿಳಿಸಿದರು. ವಿದ್ಯಾನಗರದಲ್ಲಿರುವ ಪ್ರೆಸ್ಟಿಜ್ ಹೇರ್ ಸಲ್ಯೂಷನ್, ಹೌರ ಕಾಸ್ಮೆಟಿಕ್ ಕ್ಲಿನಿಕ್, ದೇವರಾಜ ಅರಸು ಬಡಾವಣೆಯಲ್ಲಿರುವ ರೀಜಿವಾ ಹೇರ್/ಸ್ಕಿನ್/ಲೇಸರ್ ಕ್ಲಿನಿಕ್ ಆ್ಯಂಡ್ ಆಯುರ್ವೇದ ವೆಲ್ನೆಸ್ ಸೆಂಟರ್ ಮತ್ತು ವಿದ್ಯಾರ್ಥಿ ಭವನದ ಬಳಿ ಇರುವ ವಿ ಸ್ಮಾರ್ಟ್ ಹೇರ್ ಟ್ರಾನ್ಸ್ಪ್ಲಾಂಟ್ ಆ್ಯಂಡ್ ಸ್ಕಿನ್ ಸಲ್ಯೂಷನ್ ಖಾಸಗಿ ಸಂಸ್ಥೆಗಳು ಮುಚ್ಚಿದ್ದು ಇವುಗಳು ಕಾರ್ಯ ನಿರ್ವಹಿಸುತ್ತಿಲ್ಲವೆಂದು ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಖಾಸಗಿ ಕ್ಲಿನಿಕ್‌ಗಳ ಮುಖ್ಯಸ್ಥರು ಸಭೆಯಲ್ಲಿದ್ದರು.