ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆಯಲ್ಲಿ ಡಿಜೆ ಬಳಸಲು ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸ್ಪಷ್ಟಪಡಿಸಿದರು. ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಆಯೋಜಿಸಿದ್ದ ನಾಗರಿಕ ಸೌಹಾರ್ದ ಸಭೆಯಲ್ಲಿ ಮಾತನಾಡಿ, ಡಿಜೆ ಬದಲು ಕಲಾ ತಂಡಗಳನ್ನು ಕರೆಸುವ ಮೂಲಕ ಹೊಸ ಪರಿಪಾಠಕ್ಕೆ ನಾಂದಿ ಹಾಡುವಂತೆ ತಿಳಿಸಿದರು. ಡೊಳ್ಳು ಕುಣಿತ, ಕೀಲು ಕುದುರೆ ಮುಂತಾದ ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕಲಾ ತಂಡಗಳಿಗೆ ಪ್ರೋತ್ಸಾಹ ನೀಡಬೇಕು. ಅದರಿಂದ ಕಲಾವಿದರಿಗೂ ಆರ್ಥಿಕ ನೆರವು ನೀಡಿದಂತಾಗುತ್ತದೆ ಎಂದು ಹೇಳಿದರು. ಡಿಜೆ ಹಾಕಿ ಜನ ತೋರಿಸುವುದಕ್ಕಿಂತ ಮಂತ್ರಗಳನ್ನು ಪಠಿಸಿ ಭಕ್ತಿ ಪ್ರದರ್ಶಿಸಬೇಕು. ನೆರೆಯ ಜಿಲ್ಲೆ ಶಿವಮೊಗ್ಗದಲ್ಲೂ ಡಿಜೆಗೆ ಅನುಮತಿ ನೀಡದಿರಲು ತೀರ್ಮಾನಿಸಿದ್ದಾರೆ ಎಂದರು. ಫ್ಲೆಕ್ಸ್, ಬ್ಯಾನರ್ ಹಾಕಲು ಪರವಾನಗಿ ಪಡೆಯಲೇಬೇಕು. ಗಣೇಶನನ್ನು ಪ್ರತಿಷ್ಠಾಪಿಸುವ ಕಡೆ ಆಯೋಜಕರು ಸಿಸಿ ಟಿವಿ ಅಳವಡಿಸಬೇಕು. ಪೊಲೀಸರು ನಿಗದಿಪಡಿಸಿದ ಮಾರ್ಗಗಳಲ್ಲೇ ಸಾಗಬೇಕು. ವಿದ್ಯುತ್ ಅವಘಡ ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು. ಜಿಲ್ಲಾ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್ ಮಾತನಾಡಿದರು. ಡಿವೈಎಸ್ಪಿಗಳಾದ ಶರಣಬಸವೇಶ್ವರ, ಬಸವರಾಜ, ಪ್ರಕಾಶ್ ಇನ್ನಿತರ ಅಧಿಕಾರಿಗಳು ಇದ್ದರು. ಸಾರ್ವಜನಿಕರ ಪರವಾಗಿ ಅಮಾನುಲ್ಲಾ ಖಾನ್, ವೀರೇಶ್ (ನ್ಯಾಮತಿ), ವಕೀಲ ನಜೀರ್ ಅಹಮದ್, ಹನುಮನಗೌಡರು (ಮಲೇಬೆನ್ನೂರು), ಮಂಜಪ್ಪ (ಚನ್ನಗಿರಿ), ಮಹಮ್ಮದ್ ಜಬೀವುಲಾ, ವಿನಯ್, ಯಾಸೀನ್ ಪೀರ್, ರಾಜಪ್ಪ ಪೂಜಾರ್, ಮಲ್ಲೇಶ್, ಬಸವರಾಜ, ರಿಯಾಜ್, ಎಂ.ಜಿ. ಶ್ರೀಕಾಂತ್, ಯೂಸೂಫ್ ಬಾಷಾ, ಕಲ್ಲೇಶಪ್ಪ, ಟಿ. ಅಸ್ಗರ್, ಪ್ರಸನ್ನ, ಫಯಾಜ್ ಮಾತನಾಡಿದರು.