ದಾವಣಗೆರೆ : ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯದ ಜತೆಗೆ ಸ್ಮಾರ್ಟ್ ಕಲಿಕೆಗೆ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಮಕ್ಕಳ ಕಲಿಕಾ ಮಟ್ಟವನ್ನು ಉತ್ತಮಪಡಿಸಲು ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಮಾಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಿ, ಶಾಲೆಗಳಿಗೆ ಕಂಪ್ಯೂಟರ್ ಒದಗಿಸಿ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಿ ಶಿಕ್ಷಕರು ಆನ್‌ಲೈನ್‌ನಲ್ಲಿಯೇ ತರಬೇತಿ ಪಡೆದು ಸ್ಮಾರ್ಟ್ ಕ್ಲಾಸ್ ನಡೆಸಲು ಅವಕಾಶವಿದೆ ಎಂದರು.
ಜಿಲ್ಲೆಯಲ್ಲಿನ 186 ಶಾಲೆಗಳಿಗೆ ಅಗತ್ಯವಿರುವ 225 ಕೊಠಡಿಗಳನ್ನು 31.70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು 19.46 ಕೋಟಿ ರೂ. ಬಿಡುಗಡೆಯಾಗಿದೆ. ಆದಷ್ಟು ಬೇಗ ಕಾಮಗಾರಿ ಮುಕ್ತಾಯಗೊಳಿಸಿ ಉಳಿತಾಯವಾದ ಅನುದಾನದಲ್ಲಿ ಬೇಡಿಕೆ ಇರುವ ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡುವಂತೆ ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 871 ಅನುಮೋದಿತ ಕಾಮಗಾರಿಗಳಲ್ಲಿ 866 ಟೆಂಡರ್ ಕರೆಯಲಾಗಿದೆ. 520 ಪೂರ್ಣಗೊಳಿಸಿ 298 ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಇಂಜಿನಿಯರ್ ಸಭೆಗೆ ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿನ ಶುದ್ಧ ಕುಡಿಯುವ ನೀರಿನ ನಿರ್ವಹಣೆಯನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ವಹಿಸಲು ಅವಕಾಶ ಇದೆ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತಿದ್ದು ನಿರ್ವಹಣಾ ಭಾರವಿರುವುದಿಲ್ಲ. ಇದೇ ಮಾದರಿಯನ್ನು ಗ್ರಾಮೀಣ ಭಾಗದಲ್ಲೂ ಅನುಸರಿಸುವಂತೆ ಹೇಳಿದರು.
ಜಿಲ್ಲೆಯಲ್ಲಿ 981 ಎಕರೆ ರೇಷ್ಮೆ ವಿಸ್ತರಣಾ ಪ್ರದೇಶವಿದ್ದು ಕಳೆದ ಎರಡು ವರ್ಷದಲ್ಲಿ 115 ಎಕರೆಯನ್ನು ಹೊಸದಾಗಿ ವಿಸ್ತರಣೆ ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದಾಗ ಮಿಲ್ಕ್ ಮತ್ತು ಶಿಲ್ಕ್ ಪ್ರತಿ ತಿಂಗಳು ಆದಾಯ ತರುವಂತಹ ಚಟುವಟಿಕೆಯಾಗಿದ್ದು ಲಕ್ಷಾಂತರ ಮೊತ್ತದ ಆದಾಯ ಈ ಕ್ಷೇತ್ರದಲ್ಲಿ ಗಳಿಸಲು ವಿಪುಲ ಅವಕಾಶಗಳಿವೆ. ಬೆಳೆಗೆ ಬೇಕಾದ ಹವಾಮಾನದ ಬಗ್ಗೆ ರೈತರಿಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು. ಜಿ.ಪಂ. ಸಿಇಒ ಸುರೇಶ ಬಿ. ಇಟ್ನಾಳ್ ಇದ್ದರು.
...
* ಆಡಿಟ್ ಮಾಡಲು ಸೂಚನೆ
ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಶಿಶು ಮರಣವನ್ನು ತಗ್ಗಿಸಬೇಕಾಗಿದೆ. ಅಂಥ ಪ್ರಕರಣ ಸಂಭವಿಸಿದಾಗ ಕಾರಣಗಳೇನು ಎಂದು ಆಡಿಟ್ ನಡೆಸಬೇಕು ಎಂದು ಗುಂಜನ್ ಕೃಷ್ಣ ಸೂಚಿಸಿದರು.
ಕಳೆದ ಸೆಪ್ಟೆಂಬರ್ ವರೆಗೆ 12 ತಾಯಿ ಮರಣ (ಒಂದು ಲಕ್ಷ ಜನನಗಳಿಗೆ 90 ತಾಯಿ ಮರಣ). ಶಿಶು ಮರಣ 215 ಸಂಭವಿಸಿದ್ದು (ಒಂದು ಸಾವಿರ ಜನನಗಳಿಗೆ 16 ಶಿಶು ಮರಣ). ಈ ಪ್ರಮಾಣ ಗಣನೀಯವಾಗಿ ಇಳಿಕೆಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ಮರಣ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಆಡಿಟ್ ನಡೆಸಬೇಕು ಎಂದು ತಿಳಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಕ್ಟೋಬರ್ ಅಂತ್ಯದವರೆಗೆ 24.05 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಒಟ್ಟು ಜಿಲ್ಲೆಯಲ್ಲಿ 230568 ಉದ್ಯೋಗ ಚೀಟಿ ವಿತರಿಸಲಾಗಿದೆ ಎಂದು ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ್ ತಿಳಿಸಿದರು.