ಜಿಲ್ಲೆ

ಅಕ್ರಮ ಮದ್ಯ ಮಾರಾಟ, ಮತಾಂತರ ಪ್ರಯತ್ನ

ರಮೇಶ ಜಹಗೀರದಾರ್

ದಾವಣಗೆರೆ : ಅಕ್ರಮ ಮದ್ಯ ಮಾರಾಟ, ಮತಾಂತರ ಪ್ರಯತ್ನ, ಸರ್ಕಾರಿ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ, ಗೋಡೌನ್ ಆಗಿ ಬಳಕೆಯಾಗುತ್ತಿರುವ ಬಾಬು ಜಗಜೀವನ್‌ರಾಮ್ ಭವನ...  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದುಕೊರತೆಗಳನ್ನು ಆಲಿಸುವ ಸಭೆಯಲ್ಲಿ ಸಾರ್ವಜನಿಕರಿಂದ ಕೇಳಿಬಂದ ಪ್ರಮುಖ ದೂರುಗಳಿವು.  ತಾಲೂಕುವಾರು ಕುಂದುಕೊರತೆಗಳನ್ನು ಆಲಿಸಿದ ಎಸ್ಪಿ ಉಮಾ ಪ್ರಶಾಂತ್, ಸಂಬಂಧಿಸಿದ ಇಲಾಖೆ ಅಥವಾ ಅಧಿಕಾರಿಯ ಗಮನಕ್ಕೆ ತಂದು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.  ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಾರ್ ಒಂದರಿಂದ ಹರಿಹರ ತಾಲೂಕಿನ 20-30 ಹಳ್ಳಿಗಳಿಗೆ ಅಕ್ರಮ ಮದ್ಯ ಸರಬರಾಜು ಮಾಡಲಾಗುತ್ತಿದೆ. ಅಬಕಾರಿ ಇಲಾಖೆಯವರು ಮೌನ ವಹಿಸಿದ್ದಾರೆ ಎಂದು ನಾಗರಿಕರೊಬ್ಬರು ದೂರಿದರು. ಇದಕ್ಕೆ ಉತ್ತರಿಸಿದ ಎಸ್ಪಿ, ಅನಿರೀಕ್ಷಿತ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಲಾಗುವುದು ಎಂದು ಹೇಳಿದರು.  ಮುಖಂಡ ಮಂಜುನಾಥ್ ಮಾತನಾಡಿ, ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಜಾಗವಿದೆ, 10 ಲಕ್ಷ ರೂ. ಹಣವನ್ನೂ ಒದಗಿಸಲಾಗಿದೆ. ಆದರೂ 10 ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಸಭೆಯ ಗಮನ ಸೆಳೆದರು.  ದಲಿತ ಸಂಘರ್ಷ ಸಮಿತಿಯ ಹರಿಹರ ತಾಲೂಕು ಮುಖಂಡ ಪಿ.ಜೆ. ಮಹಾಂತೇಶ್ ಮಾತನಾಡಿ, ಜಾತಿಗಣತಿ ವೇಳೆ ವೀರಶೈವ ಜಂಗಮ ಸಮುದಾಯದ ಕೆಲವರು ತಾವು ಪರಿಶಿಷ್ಟ ಜಾತಿಯವರು ಎಂದು ಬರೆಸಿದ್ದಾರೆ. ಈ ದುರುಪಯೋಗವನ್ನು ತಡೆಯಬೇಕು ಎಂದು ಆಗ್ರಹಿಸಿದರು.  ಕಡ್ಲೆಗುಂದಿ ಗ್ರಾಮಕ್ಕೆ ಬಸ್ ಸಂಚಾರದ ವ್ಯವಸ್ಥೆ ಮಾಡಬೇಕು. ದಲಿತ ನಾಯಕ ಪ್ರೊ. ಬಿ. ಕೃಷ್ಣಪ್ಪ ಅವರ ಮನೆಯನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು.  ಜಾತಿಗಣತಿಯ ವೇಳೆ ಯಾರಾದರೂ ದುರುಪಯೋಗ ಮಾಡಿಕೊಂಡಿದ್ದರೆ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಎಸ್ಪಿ ತಿಳಿಸಿದರು.  ಅಕ್ರಮ ಮರಳುಗಾರಿಕೆಯಿಂದಾಗಿ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ತೊಂದರೆಯಾಗುತ್ತಿದೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ರೈತರೊಬ್ಬರು ದೂರಿದರು. ಹಳ್ಳಿಗಳಲ್ಲಿ ದಲಿತರ ಸಭೆಗಳಾಗಬೇಕು, ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.  ಮಲೇಬೆನ್ನೂರಿನಲ್ಲಿ ಶಾಲೆ ಪಕ್ಕದಲ್ಲಿ ಬಾರ್ ಇದೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅದನ್ನು ಸ್ಥಳಾಂತರಿಸಬೇಕು ಎಂಬ ಆಗ್ರಹ ಕೇಳಿಬಂದಿತು.