ದಾವಣಗೆರೆ : ಅಪೌಷ್ಟಿಕತೆ ನಿರ್ಮೂಲನೆಗಾಗಿ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ಮೊಟ್ಟೆ ಸೌಲಭ್ಯ ಕಲ್ಪಿಸಿದೆ. ಅದನ್ನು ಸಮರ್ಪಕವಾಗಿ ವಿತರಿಸದೇ ಕೆಲವು ಶಿಕ್ಷಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಆರೋಪಿಸಿದರು. ಇಲ್ಲಿನ ಪಶುಸಂಗೋಪನಾ ಇಲಾಖೆಯ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಪಂಚಾಯಿತಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ವಾರದ 6 ದಿನವೂ ಮೊಟ್ಟೆ ವಿತರಿಸದೇ ಕೆಲ ಶಿಕ್ಷಕರು ಮೋಸ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿದಾಗ ಸರ್ಕಾರಿ ಶಾಲೆಗಳಿಗೂ ಭೇಟಿ ನೀಡುತ್ತಿದ್ದೇನೆ. ಕೆಲ ಶಾಲಾ ಶಿಕ್ಷಕರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಬಹುತೇಕ ಶಾಲೆಗಳಲ್ಲಿ ಇಂತಹ ವಾತಾವರಣವಿಲ್ಲ. ದುರುಪಯೋಗದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಅರಿವಿಲ್ಲ ಎಂದು ಹೇಳಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೂ ಮೊಟ್ಟೆ ಬದಲು ಶೇಂಗಾ ಚಿಕ್ಕಿ ನೀಡಲಾಗುತ್ತಿದೆ. ಶೇಂಗಾ ಚಿಕ್ಕಿ ನೀಡದಂತೆ ಸರ್ಕಾರ ಸೂಚಿಸಿದರೂ ಮೊಟ್ಟೆ ಹಣ ಉಳಿಸಲು ಕೆಲ ಶಿಕ್ಷಕರು ವಾಮಮಾರ್ಗ ಅನುಸರಿಸುತ್ತಿದ್ದಾರೆ. ತಾಲೂಕು ಮಟ್ಟದ ಅಧಿಕಾರಿಗಳು ಶಾಲೆಗಳಿಗೆ ಆಗಾಗ ಭೇಟಿ ನೀಡಿ ಶಿಕ್ಷಣ ವ್ಯವಸ್ಥೆಯ ಸುಧಾರಣೆಯತ್ತ ಗಮನ ಹರಿಸಬೇಕು ಎಂದು ಸೂಚಿಸಿದರು. ವರ್ಷವಿಡೀ ಏಕದರದಲ್ಲಿ ಮೊಟ್ಟೆ ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಬೆಲೆ ಏರಿಳಿತವು ಶಾಲಾ ವಿದ್ಯಾರ್ಥಿಗಳ ಪೌಷ್ಟಿಕ ಆಹಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಶಿಕ್ಷಣ ಮತ್ತು ಪಶುಪಾಲನಾ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡು ವರದಿ ನೀಡಬೇಕು ಎಂದರು. ಕೃಷಿ ಭಾಗ್ಯವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ ರೂಪಿಸಿದ ಈ ಯೋಜನೆಗೆ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಮಳೆಯಾಶ್ರಿತ ಪ್ರದೇಶದ ರೈತರಿಗೆ ಇದರಿಂದ ಅನುಕೂಲವಾಗುತ್ತಿದೆ. ಕೃಷಿ ಹೊಂಡ ಹಾಗೂ ಚೆಕ್‌ಡ್ಯಾಂ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ತಿಳಿಸಿದರು. ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಶಾಸಕರು ಸೂಚಿಸಿದರು. ಶೇ 100ರಷ್ಟು ಕರ ವಸೂಲಿ ಮಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ತಾಲೂಕು ಪಂಚಾಯಿತಿ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ತಹಸೀಲ್ದಾರ್ ಡಾ.ಎಂ.ಬಿ. ಅಶ್ವತ್ಥ್ ಇದ್ದರು. ... (ಬಾಕ್ಸ್) ಅತ್ಯುತ್ತಮ ತಾ.ಪಂ. ಪ್ರಶಸ್ತಿ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ತೋರಿದ ಸಾಧನೆಗಾಗಿ ದಾವಣಗೆರೆ ತಾಲೂಕು ಪಂಚಾಯಿತಿಗೆ ಅತ್ಯುತ್ತಮ ತಾಲೂಕು ಪಂಚಾಯಿತಿ ರಾಜ್ಯ ಪ್ರಶಸ್ತಿ ದೊರಕಿದೆ. ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಕೂಲಿ ಪಾವತಿಸಲಾಗಿದೆ. ಶೇ. 56ರಷ್ಟು ಮಹಿಳಾ ಕಾರ್ಮಿಕರಿಗೆ ಕೆಲಸ ಸಿಕ್ಕಿದೆ. ಕೆರೆ ಹೂಳೆತ್ತುವುದು, ಶಾಲಾ ಕಾಂಪೌಂಡ್ ನಿರ್ಮಾಣ ಸೇರಿ ಜನೋಪಯೋಗಿ ಕಾರ್ಯ ಮಾಡಲಾಗಿದೆ. ಇದನ್ನು ಪರಿಗಣಿಸಿ ಸರ್ಕಾರ ಪ್ರಶಸ್ತಿ ನೀಡಿದೆ ಎಂದು ತಾ.ಪಂ. ಇಒ ರಾಮ ಭೋವಿ ತಿಳಿಸಿದರು.