ಜಿಲ್ಲೆ

ಬಿಡಿಎ ಮಾದರಿಯಲ್ಲಿ ಮನೆಗಳ ನಿರ್ಮಾಣ

ರಮೇಶ ಜಹಗೀರದಾರ್

ದಾವಣಗೆರೆ :  ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಬಿಡಿಎ ಮಾದರಿಯಲ್ಲಿ ಮನೆಗಳ ನಿರ್ಮಾಣ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೂಚನೆ ನೀಡಿದರು.  ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.  ದಾವಣಗೆರೆ, ಹರಿಹರ ಸೇರಿ ಜಿಲ್ಲೆಯ ಎಲ್ಲ ಭಾಗಗಳು ಅಭಿವೃದ್ಧಿಯತ್ತ ಸಾಗಬೇಕು. ಪ್ರದೇಶವಾರು ಆಧಾರದಲ್ಲಿ ದರ ನಿಗದಿಪಡಿಸಿ ಪ್ರಾಧಿಕಾರದಿಂದ ಹೊಸ ಬಡಾವಣೆ, ಅಪಾರ್ಟ್‌ಮೆಂಟ್ ನಿರ್ಮಾಣ ಹಾಗೂ ನಿವೇಶನ ರಚನೆಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.  ದಾವಣಗೆರೆ ದಕ್ಷಿಣ ಹಾಗೂ ಉತ್ತರ ಭಾಗಗಳಲ್ಲಿ ಹೊಸ ಲೇಔಟ್ ನಿರ್ಮಾಣವಾಗಿವೆ. ಪಾರದರ್ಶಕವಾಗಿ ಇ-ಸ್ವತ್ತು ನೀಡಬೇಕು. ಅದನ್ನು ಆನ್‌ಲೈನ್ ಮಾಡಲು ನಿರ್ಧರಿಸಲಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆ ಉತ್ತಮವಾಗಿದೆ.  2003-2008 ರ ಅವಧಿಯಲ್ಲಾದ ಕಾಮಗಾರಿಗಳಿಂದ ಇಂದು ದಾವಣಗೆರೆ ಜಿಲ್ಲೆಗೆ ಖ್ಯಾತಿ ಬಂದಿದೆ ಎಂದು ತಿಳಿಸಿದರು.  ವಿನೋಬ ನಗರ, ಎಲ್ಲಮ್ಮ ನಗರ, ಜಾಲಿನಗರ ಸೇರಿದಂತೆ ಹತ್ತಾರು ಬಡಾವಣೆಗಳಿಂದ 40 ಸಾವಿರ ಅರ್ಜಿಗಳನ್ನು ಅಕ್ರಮ ಸಕ್ರಮ ಮಾಡಲಾಗಿದೆ. ಸಾವಿರಾರು ರೂಪಾಯಿ ಇದ್ದ ಭೂಮಿ ಬೆಲೆ ಕೋಟಿಗೆ ತಲುಪಿದೆ. ನಮ್ಮ ಅವಧಿಯಲ್ಲಾದ ಕೆಲಸಗಳನ್ನು ಜನರು ಇಂದಿಗೂ ಸ್ಮರಿಸುತ್ತಿದ್ದಾರೆ ಎಂದರು.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಇಲ್ಲ. ಈ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚೆ ನಡೆಯಲಿದೆ. ಯುಬಿಡಿಟಿ ಕಾಲೇಜು ಪೇಮೆಂಟ್ ಕೋಟಾ ವಿರೋಧಿಸಿ ದಾವಣಗೆರೆ ಬಂದ್‌ಗೆ ಕರೆ ನೀಡಿರುವ ಬಗ್ಗೆ ಗಮನ ಸೆಳೆದಾಗ ಈ ವಿಚಾರವನ್ನೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.  ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮೇಯರ್ ಕೆ. ಚಮನ್‌ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ದೂಡಾ ಆಯುಕ್ತ ಹುಲ್ಮನಿ ತಿಮ್ಮಪ್ಪ ಹಾಗೂ ಸದಸ್ಯರು ಇದ್ದರು.