ಜಿಲ್ಲೆ

ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ 15 ದಿನಗಳ ಗಡುವು

ರಮೇಶ ಜಹಗೀರದಾರ್

ದಾವಣಗೆರೆ :  ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಯಡಿ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ವೈಯಕ್ತಿಕ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು 15 ದಿನಗಳಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.  ಜಿಲ್ಲಾಡಳಿತ ಭವನದಲ್ಲಿ ಗುರುವಾರ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಈ ವಿಷಯದಲ್ಲಿ ವಿಳಂಬ ಮಾಡದೇ ಕಾರ್ಯೋನ್ಮುಖವಾಗಬೇಕು ಎಂದು ತಾಕೀತು ಮಾಡಿದರು.  ಫಲಾನುಭವಿಗಳ ಆಯ್ಕೆ ಸಂಬಂಧ ಶಾಸಕರನ್ನು ಭೇಟಿಯಾಗಿ, ಅವರೊಂದಿಗೆ ಚರ್ಚಿಸಿ ಜಾರಿಗೊಳಿಸಬೇಕು. ಶೂನ್ಯ ಪ್ರಗತಿಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.  ಯೋಜನೆಯಡಿ ಅನುದಾನ ಬಂದರೂ ವೆಚ್ಚ ಮಾಡದಿದ್ದರೆ ಅಪರಾಧವಾಗುತ್ತದೆ. ಅನುಷ್ಠಾನ ಹಂತದಲ್ಲಿ ನಿವೇಶನ ಇನ್ನಿತರ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತೆಗೆದುಕೊಂಡು ಬನ್ನಿ. ಅನುದಾನ ಬಂದಿಲ್ಲದಿದ್ದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯೋಣ ಎಂದರು. ಇದುವರೆಗೆ ಅನುದಾನ ಬಳಸದೆ ನಿರ್ಲಕ್ಷೃ ತೋರಿದವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸುವಂತೆ ಸೂಚನೆ ನೀಡಿದರು.  ಬೆಸ್ಕಾಂ, ತೋಟಗಾರಿಕೆ, ಪಮಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗ, ಜಿಲ್ಲಾ ನಗರಾಭಿವೃದ್ಧಿ ಕೋಶ ಮುಂತಾದ ಇಲಾಖೆಗಳಲ್ಲಿ ಆಗಿರುವ ಪ್ರಗತಿಯ ಮಾಹಿತಿಯನ್ನು ಜಿಲ್ಲಾಧಿಕಾರಿ ಪಡೆದುಕೊಂಡರು. ಕಡಿಮೆ ಸಾಧನೆ ಮಾಡಿರುವ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು. ಜನಸಂಖ್ಯೆ ಆಧರಿಸಿ ಕ್ರಿಯಾಯೋಜನೆ ರೂಪಿಸಬೇಕು. ಎಲ್ಲಿಯೂ ದೂರು ಬರದಂತೆ ನೋಡಿಕೊಳ್ಳಬೇಕು ಎಂದರು.  ಸಮುದಾಯ ಭವನ, ರಂಗಮಂದಿರ, ಹಾಸ್ಟೆಲ್, ಅಂಗನವಾಡಿ, ಶಾಲೆ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಆ ಸೌಲಭ್ಯ ಜನರಿಗೆ ತಲುಪುವಂತೆ ಮಾಡಬೇಕು ಎಂದು ತಿಳಿಸಿದರು. ಜಿಲ್ಲಾ ರಂಗ ಮಂದಿರ ಕಟ್ಟಡದ ಉದಾಹರಣೆ ನೀಡಿದ ಅವರು, ಅದಕ್ಕೆ ಹೆಚ್ಚಿನ ಅನುದಾನದ ತರುವ ಮೂಲಕ ಕಾಯಕಲ್ಪ ಒದಗಿಸುವ ಅಗತ್ಯವಿದೆ ಎಂದು ಹೇಳಿದರು.  ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಜನರಿಗೆ ಶುದ್ಧ ನೀರು ದೊರೆಯಬೇಕು ಎಂದು ತಿಳಿಸಿದರು.  ಭಾರೀ ಮಳೆಯಿಂದಾಗಿ ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆ ನೀರು ನುಗ್ಗಿದ ವಿಷಯವೂ ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಷಣ್ಮುಖಪ್ಪ ವಿವರ ನೀಡಿದರು. ಅಲ್ಲಿನ ವಿದ್ಯುತ್ ವ್ಯವಸ್ಥೆಯಲ್ಲಿ ಏನಾದರೂ ಲೋಪಗಳಿವೆಯೆ (ಅರ್ತಿಂಗ್ ಇತ್ಯಾದಿ) ಎಂದು ಪರಿಶೀಲಿಸುವಂತೆ ಡಿಸಿ ಗಂಗಾಧರ ಸ್ವಾಮಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.  ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ. ಮಹಾಂತೇಶ್, ಸಹಾಯಕ ಕೃಷಿ ನಿರ್ದೇಶಕ ವೀರೇಶ ಕಲ್ಮನಿ ಇನ್ನಿತರ ಅಧಿಕಾರಿಗಳು ಇದ್ದರು.