ಜಿಲ್ಲೆ

ಸ್ವಕುಳಸಾಳಿ ಸಮಾಜದ ರಾಜ್ಯಮಟ್ಟದ ಸಭೆ

ರಮೇಶ ಜಹಗೀರದಾರ್

ದಾವಣಗೆರೆ : ಅತಿ ಹಿಂದುಳಿದ ಸಮಾಜಗಳಲ್ಲಿ ಒಂದಾದ, ಮೂಲತಃ ನೇಕಾರಿಕೆ ಕಸುಬು ಹೊಂದಿರುವ ಸ್ವಕುಳಸಾಳಿ ಸಮಾಜದ ರಾಜ್ಯಮಟ್ಟದ ಕಾರ್ಯಕಾರಿ ಸಮಿತಿ ಸಭೆಯನ್ನು ಭಾನುವಾರ ನಗರದಲ್ಲಿ ಆಯೋಜಿಸಲಾಗಿದೆ.
 ಇದೇ ಸಂದರ್ಭದಲ್ಲಿ ರಾಜ್ಯ ಸ್ವಕುಳಸಾಳಿ ಶಿಕ್ಷಣ ಸಂಸ್ಥೆಯ 2023-24ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯೂ ನಡೆಯಲಿದೆ. ಜತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ. 90ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುವ ಸ್ವಕುಳಸಾಳಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರವನ್ನೂ ನೀಡಲಾಗುವುದು.
 ಸ್ವಕುಳಸಾಳಿ ಸಮಾಜದ ರಾಜ್ಯಮಟ್ಟದ ಕಾರ್ಯಕ್ರಮ ದಾವಣಗೆರೆಯಲ್ಲಿ ಇದೇ ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದ್ದು ಇದರ ಆತಿಥ್ಯವನ್ನು ಸಮಾಜದ ದಾವಣಗೆರೆ ಘಟಕ ವಹಿಸಿಕೊಂಡಿದೆ.
 ಭಾನುವಾರ ಬೆಳಗ್ಗೆ 10.30ಕ್ಕೆ ಹೊಂಡದ ಸರ್ಕಲ್ ಬಳಿಯ ಶ್ರೀ ಜಿಹ್ವೇಶ್ವರ ಧ್ಯಾನ ಮಂದಿರದಲ್ಲಿ ಏರ್ಪಾಡಾಗಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ, ರಾಜ್ಯ ಸ್ವುಕುಳಸಾಳಿ ಸಮಾಜದ ಅಧ್ಯಕ್ಷ ಚಂದ್ರಕಾಂತ ಎನ್. ಭಂಡಾರೆ ವಹಿಸಲಿದ್ದಾರೆ. ಮಹಾನಗರ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಖಿಲ ಭಾರತ ಸ್ವಕುಳಸಾಳಿ ಸಮಾಜದ ಅಧ್ಯಕ್ಷ ರಮೇಶ್ ಚಿಲ್ಲಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
 ರಾಜ್ಯದ ವಿವಿಧ ಭಾಗಗಳಿಂದ ಸಮಾಜದ ಹಿರಿಯರು, ರಾಜ್ಯ ಪದಾಧಿಕಾರಿಗಳು, ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಪಾಲಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದಾವಣಗೆರೆ ಸ್ವಕುಳಸಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ, ಸಮಾಜದ ಗುರುಪೀಠ ಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮರಾಜ ಏಕಬೋಟೆ ತಿಳಿಸಿದ್ದಾರೆ.
 ಸಮಾಜದ ದಾವಣಗೆರೆ ಘಟಕದ ಅಧ್ಯಕ್ಷ ಡಾ. ಜಿ.ಪಿ. ಮೋಹನ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದು, ಸಮಾಜದವರು ಭಾಗವಹಿಸಬೇಕು ಎಂದು ಕೋರಿದ್ದಾರೆ.