ಜಿಲ್ಲೆ

ಸಾಮರಸ್ಯದಿಂದ ಜೀವನ ಸುಗಮ

ರಮೇಶ ಜಹಗೀರದಾರ್

ದಾವಣಗೆರೆ : ನವ ದಂಪತಿ ಪರಸ್ಪರ ಪ್ರೀತಿಯಿಂದ ಸಾಮರಸ್ಯ ಬದುಕು ನಡೆಸಬೇಕು. ಹಾಗಾದಾಗ ಮಾತ್ರ ಸುಗಮ ಜೀವನ ನಡೆಸಲು ಸಾಧ್ಯ ಎಂದು ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಗೌರವಾಧ್ಯಕ್ಷರು ಹಾಗೂ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
 ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ನಿಂದ ನಗರದ ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಬದುಕಿನ ಬಂಡಿ ಸುಗಮವಾಗಿ ಸಾಗಬೇಕಾದರೆ ಎರಡು ಚಕ್ರಗಳು ಸರಿಯಾಗಿರಬೇಕು. ಅದರಂತೆ ಜೀವನದ ರಥಕ್ಕೆ ದಂಪತಿ ಎರಡು ಚಕ್ರಗಳಿದ್ದಂತೆ. ಇಬ್ಬರೂ ಮುನಿಸಿಕೊಂಡರೆ ಬದುಕು ಏರುಪೇರಾಗುತ್ತದೆ. ಸಾಮರಸ್ಯದಿಂದ ನಡೆದಾಗ ಒಳ್ಳೆ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.
 ಕುಟುಂಬದಲ್ಲಿ ಹಿರಿಯರ ಬಗ್ಗೆ ತಾತ್ಸಾರ ಮನೋಭಾವ ಸಲ್ಲದು. ಗೌರವದಿಂದ ಕಾಣಬೇಕು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಬೇಕು. ಬಡಜನರ ಆರ್ಥಿಕ ಹೊರೆ ತಗ್ಗಿಸಲು ಸಾಮೂಹಿಕ ವಿವಾಹಗಳು ಸಹಕಾರಿ ಎಂದರು.
 ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ ಮಾತನಾಡಿ, ದುರ್ಗಾಂಬಿಕಾದೇವಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಟ್ರಸ್ಟ್‌ನಿಂದ ಪ್ರತಿವರ್ಷ ಸಾಮೂಹಿಕ ವಿವಾಹ ಮಹೋತ್ಸವ ನಡೆಸಲಾಗುತ್ತಿದೆ. ಇದರಿಂದ ಬಡಜನರಿಗೆ ಬಹಳಷ್ಟು ಅನುಕೂಲವಾಗಿದೆ ಎಂದರು.
 ಇದೇ ಸಂದರ್ಭದಲ್ಲಿ 14 ಜೋಡಿ ನೂತನ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ರೇವಣಸಿದ್ದಯ್ಯ ಶಾಸ್ತ್ರಿಗಳು ವಿವಾಹ ಕಾರ್ಯಕ್ರಮದ ವಿಧಿ ವಿಧಾನ ನಡೆಸಿಕೊಟ್ಟರು.