ಜಿಲ್ಲೆ

ರಂಗೇರಿದ ದಸರಾ, ಹಬ್ಬದ ಖರೀದಿ ಜೋರು

ರಮೇಶ ಜಹಗೀರದಾರ್

ದಾವಣಗೆರೆ : ಜಿಲ್ಲೆಯಲ್ಲಿ ದಸರಾ ಹಬ್ಬ ರಂಗೇರಿದ್ದು ಸಂಭ್ರಮ, ಸಡಗರ ತುಂಬಿದೆ. ಪೂಜೆ, ಅಲಂಕಾರ ಸೇರಿ ಹಬ್ಬದ ಸಾಮಗ್ರಿಗಳ ಖರೀದಿ ಮಂಗಳವಾರ ಜೋರಾಗಿತ್ತು. ನಗರದ ವಿವಿಧ ರಸ್ತೆ, ವೃತ್ತಗಳಲ್ಲಿ ವ್ಯಾಪಾರ ನಡೆಯಿತು.  ಪ್ರವಾಸಿ ಮಂದಿರ ರಸ್ತೆಯ ಇಕ್ಕೆಲಗಳಲ್ಲಿ ಹಣ್ಣು, ಹೂವು, ಬಾಳೆಕಂಬ ಇನ್ನಿತರ ಸಾಮಗ್ರಿ, ಪರಿಕರಗಳು ತುಂಬಿಕೊಂಡಿದ್ದವು. ವಿವಿಧ ಊರುಗಳಿಂದ ಸೋಮವಾರ ರಾತ್ರಿಯೇ ಬಂದು ತಂಗಿದ್ದ ವ್ಯಾಪಾರಸ್ಥರು ಮಂಗಳವಾರ ಬೆಳಗ್ಗೆಯಿಂದ ವ್ಯಾಪಾರ ಆರಂಭಿಸಿದರು. ಸಹಜವಾಗಿಯೇ ಬೆಳಗ್ಗೆ ವ್ಯಾಪಾರ ಡಲ್ ಆಗಿತ್ತು. ಸಂಜೆ ಹೊತ್ತಿಗೆ ಚುರುಕಾಯಿತು.  ಬಾಳೆ ಕಂಬ, ಕುಂಬಳಕಾಯಿ, ಬಾಳೆ ಎಲೆ, ಮಾವಿನ ಸೊಪ್ಪನ್ನು ಹಳ್ಳಿಗಳಲ್ಲಿ ರೈತರ ತೋಟಗಳಿಂದ ಖರೀದಿಸಿ ತಂದಿದ್ದರು. ಬಾಡಿಗೆ ವಾಹನದಲ್ಲಿ ಅವುಗಳನ್ನು ಸಾಗಿಸಿದ್ದರು. ಈ ಹಬ್ಬದಲ್ಲಿ ಒಂದಿಷ್ಟು ವ್ಯಾಪಾರ ಮಾಡಿ ನಾಲ್ಕು ಕಾಸು ಸಂಪಾದನೆ ಮಾಡಬೇಕೆಂಬ ಆಸೆ ಅವರಲ್ಲಿತ್ತು.  ಕೆಲವರು ಮಹಿಳೆಯರು, ಮಕ್ಕಳು ಸೇರಿ ಕುಟುಂಬ ಸಮೇತರಾಗಿ ಬಂದಿದ್ದರು. ರಸ್ತೆ ಬದಿ ಕುಳಿತು ಬಿಡಿ ಹೂವುಗಳನ್ನು ಕಟ್ಟುತ್ತಿದ್ದರು. ಬಿಸಿಲಲ್ಲಿ ಕೊಡೆಯ ಆಸರೆ ಪಡೆದಿದ್ದರು. ವ್ಯಾಪಾರಸ್ಥರೊಂದಿಗೆ ಚೌಕಾಸಿ ವ್ಯವಹಾರ ನಡೆದಿತ್ತು. ಕೆಲವರು ದ್ವಿಚಕ್ರ ವಾಹನದಲ್ಲಿ ಮತ್ತೆ ಕೆಲವರು ಕಾರುಗಳಲ್ಲಿ ಬಂದು ಹಬ್ಬದ ಸಾಮಗ್ರಿಗಳನ್ನು ಖರೀದಿಸಿದರು.  ಪ್ರವಾಸಿ ಮಂದಿರ ರಸ್ತೆ ವ್ಯಾಪಾರಸ್ಥರು, ಗ್ರಾಹಕರಿಂದ ತುಂಬಿತ್ತು. ಇದರಿಂದಾಗಿ ಲಾಯರ್ ರಸ್ತೆ ಸೇರಿ ಸುತ್ತಲಿನ ಪ್ರದೇಶದಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಶಾಮನೂರು ರಸ್ತೆ, ಗಡಿಯಾರ ಕಂಬದ ಬಳಿ ಹಾಗೂ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ಗರಿಗೆದರಿತ್ತು.  ವಿವಿಧ ಗಾತ್ರದ ಬೂದುಗುಂಬಳ ಕಾಯಿಗಳ ಮಾರಾಟ ಭರ್ಜರಿಯಾಗಿತ್ತು. ಸಣ್ಣವು, ದೊಡ್ಡವು ಅಳತೆ, ತೂಕಕ್ಕೆ ತಕ್ಕಂತೆ ಬೆಲೆ 50 ರೂ.ಗಳಿಂದ 120 ರೂ. ವರೆಗೂ ಇತ್ತು. ಹಳದಿ, ಕೆಂಪು ಸೇರಿ ಬಣ್ಣ ಬಣ್ಣದ ಸೇವಂತಿಗೆ, ಚೆಂಡು ಹೂವಿನ ಪರಿಮಳ ಆವರಿಸಿತ್ತು. ಅಲ್ಲಲ್ಲಿ ತುಳಸಿಯನ್ನೂ ಇಡಲಾಗಿತ್ತು. ಅರಿಷಿಣ, ಕುಂಕುಮ, ಊದುಬತ್ತಿ, ಗೆಜ್ಜೆವಸ್ತ್ರ, ತೆಂಗಿನಕಾಯಿ, ವೀಳ್ಯದೆಲೆ ಇನ್ನಿತರ ಪರಿಕರಗಳೂ ಮಾರುಕಟ್ಟೆಯಲ್ಲಿ ಕಂಡುಬಂದವು.  ಹಬ್ಬಕ್ಕಾಗಿ ಮನೆ, ಅಂಗಡಿ, ವಾಣಿಜ್ಯ ಮಳಿಗೆಗಳನ್ನು ಸ್ವಚ್ಛಗೊಳಿಸಿ ಸಿಂಗರಿಸಲಾಗುತ್ತಿದೆ. ಮಾವಿನ ತೋರಣ ಕಟ್ಟಿ ನಾಳೆಯ ಆಯುಧ ಪೂಜೆ ಹಾಗೂ ಮರುದಿನದ ವಿಜಯ ದಶಮಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.