ಜಿಲ್ಲೆ

ಏ. 22 ರಿಂದ ಜಿಲ್ಲೆಯಲ್ಲಿ ಉಪ ಲೋಕಾಯುಕ್ತ ಪ್ರವಾಸ

ರಮೇಶ ಜಹಗೀರದಾರ್

ದಾವಣಗೆರೆ :  ಉಪ ಲೋಕಾಯುಕ್ತ ವೀರಪ್ಪ ಅವರು ಏ. 22 ರಿಂದ 26 ರ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.  ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರ ಭೇಟಿಯ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಅಹವಾಲನ್ನು ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.  ಏ. 23 ರಂದು ವಕೀಲರ ಸಂಘದಲ್ಲಿ ನಡೆಯುವ ಸಂವಾದದಲ್ಲಿ ಪಾಲ್ಗೊಳ್ಳುವರು. 25 ರಂದು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು ಎಂದು ಮಾಹಿತಿ ನೀಡಿದರು.  ಸರ್ಕಾರದ ಕಚೇರಿಗಳಲ್ಲಿ ಕೆಲಸದ ಅನಗತ್ಯ ವಿಳಂಬ, ಅರ್ಜಿ ವಿಲೇವಾರಿ ವಿಳಂಬ, ಹಣದ ಬೇಡಿಕೆ ಇಡುವುದು, ಸಾಮಾಜಿಕ ಭದ್ರತಾ ಯೋಜನೆಗಳು ಸಮರ್ಪಕವಾಗಿ ದೊರೆಯದಿರುವುದು ಸೇರಿ ತಮ್ಮ ತೊಂದರೆಗಳನ್ನು ಹೇಳಿಕೊಳ್ಳಬಹುದು. ಹಲವು ನ್ಯಾಯಾಧೀಶರು ಹಾಜರಿರಲಿದ್ದಾರೆ ಎಂದು ತಿಳಿಸಿದರು.  ಲೋಕಾಯುಕ್ತ ಸಂಸ್ಥೆಯಲ್ಲಿ ಜಿಲ್ಲೆಗೆ ಸಂಬಂಧಿಸಿದ 318 ದೂರುಗಳಿವೆ. ಅವುಗಳಿಗೆ ಸಂಬಂಧಿಸಿದಂತೆ ಈಗಾಗಲೇ ಲಿಖಿತ ಉತ್ತರ ಸಲ್ಲಿಸಿದ್ದೇವೆ. ಆ ಕೇಸ್‌ಗಳಿಗೆ ಸಂಬಂಧಿಸಿದಂತೆ ಸ್ಥಳದಲ್ಲೇ ಪರಿಹಾರ ಸಿಗುವ ಸಾಧ್ಯತೆಯೂ ಇದೆ ಎಂದು ಹೇಳಿದರು.  ಉಪ ಲೋಕಾಯುಕ್ತರು ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಸ್ಟೆಲ್, ಆಸ್ಪತ್ರೆ, ಎಪಿಎಂಸಿ, ಆಹಾರ ದಾಸ್ತಾನು ಗೋಡೌನ್, ಆರ್‌ಟಿಒ ಕಚೇರಿ ಮುಂತಾದ ಕಡೆಗಳಿಗೆ ಭೇಟಿ ನೀಡಿದ್ದಾರೆ. ನೈರ್ಮಲ್ಯ, ಕುಡಿಯುವ ನೀರಿನ ಗುಣಮಟ್ಟವನ್ನೂ ಪರಿಶೀಲಿಸಿದ್ದಾರೆ. ನಮ್ಮ ಜಿಲ್ಲೆಗೆ ಭೇಟಿ ನೀಡಿದಾಗಲೂ ಇಂಥ ಅನಿರೀಕ್ಷಿತ ಭೇಟಿ ನೀಡುವ ಸಾಧ್ಯತೆಯೂ ಇದೆ ಎಂದು ತಿಳಿಸಿದರು.  ಜಿಲ್ಲೆಯ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರು ಇ-ಖಾತಾಗೆ ಸಲ್ಲಿಸಿರುವ ಬಹಳಷ್ಟು ಅರ್ಜಿಗಳು ವಿಲೇವಾರಿಯಾಗಿಲ್ಲ. ಸಾಮಾಜಿಕ ಭದ್ರತಾ ಯೋಜನೆಗಳು, ಸಕಾಲ ಅರ್ಜಿಗಳ ವಿಲೇವಾರಿಯನ್ನು ತ್ವರಿತವಾಗಿ ಮಾಡುವಂತೆ ಜಿಲ್ಲೆಯ ಅಧಿಕಾರಿಗಳು, ಸಿಬ್ಬಂದಿಗೆ ಸೂಚನೆ ನೀಡಲಾಗುವುದು ಎಂದರು.  ನ್ಯಾಯಾಧೀಶ ಮಹಾವೀರ ಕರೆಣ್ಣವರ, ಲೋಕಾಯುಕ್ತ ಎಸ್ಪಿ ಎಸ್.ಎಂ. ಕೌಲಾಪುರೆ ಮಾತನಾಡಿದರು. ಎಸ್ಪಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಸುದ್ದಿಗೋಷ್ಠಿಯಲ್ಲಿದ್ದರು.  ...  (ಬಾಕ್ಸ್)  ಜನತಾ ದರ್ಶನ ಕಾರ್ಯಕ್ರಮ  ಏಪ್ರಿಲ್ ತಿಂಗಳಿಂದ ಜಿಲ್ಲೆಯಲ್ಲಿ ತಾಲೂಕುವಾರು ಮತ್ತು ಹೋಬಳಿವಾರು ಜನತಾ ದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ ಎಂದು ಡಿಸಿ ಗಂಗಾಧರ ಸ್ವಾಮಿ ತಿಳಿಸಿದರು.  ಜನರ ಬಳಿಗೇ ತೆರಳಿ ಅವರ ಅಹವಾಲುಗಳಿಗೆ ಸ್ಪಂದಿಸುವುದು ಇದರ ಉದ್ದೇಶವಾಗಿದೆ. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಿಂದ ಆರಂಭಿಸಲಾಗುವುದು ಎಂದು ಹೇಳಿದರು.  ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ವಿಚಾರದಲ್ಲಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಟಾಪ್ 5 ಸ್ಥಾನದಲ್ಲಿದೆ ಎಂದು ತಿಳಿಸಿದರು.  ಸಕಾಲ ಅರ್ಜಿಗಳ ವಿಲೇವಾರಿ, ಆಧಾರ್ ಸೀಡಿಂಗ್, ಕೆರೆ ಒತ್ತುವರಿ ತೆರವು, ಕುಡಿಯುವ ನೀರಿನ ಗುಣಮಟ್ಟ ಕಾಪಾಡಿಕೊಳ್ಳುವುದರಲ್ಲಿ ಮುಂದಿದೆ. ಅಪರಾಧ ಮತ್ತು ಅಪಘಾತ ಪ್ರಮಾಣ ಇಳಿಕೆಯಾಗಿದೆ. ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು.  ನಗರದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಒಂದು ವಾರದೊಳಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.    ...  (ಕೋಟ್)  ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಗಂಭೀರ ಸಮಸ್ಯೆ ಇಲ್ಲ. 197 ಸಮಸ್ಯಾತ್ಮಕ ಗ್ರಾಮಗಳಿವೆ. 326 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲು ಗುರುತಿಸಲಾಗಿದೆ. ಚನ್ನಗಿರಿ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಮಾತ್ರ ಖಾಸಗಿ ಬೋರ್ ಬಾಡಿಗೆಗೆ ಪಡೆಯಲಾಗಿದೆ. ಅಗತ್ಯ ಸಂದರ್ಭಗಳಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲು 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.   ಸುರೇಶ ಬಿ. ಇಟ್ನಾಳ್, ಜಿ.ಪಂ. ಸಿಇಒ