ಜಗಳೂರು : ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಮಾಣಿಕತೆ, ಶಿಸ್ತಿನಿಂದ ಕೆಲಸ ಮಾಡಿದರೆ ಸಾರ್ವಜನಿಕರಿಂದ ಯಾವ ದೂರು ಬರುವುದಿಲ್ಲ. ನಿರ್ಲಕ್ಷೃ, ಬೇಜವಾಬ್ದಾರಿಯಿಂದ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದು ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪೂರೆ ತಿಳಿಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಲೋಕಾಯುಕ್ತ ಪೊಲೀಸರು ಹಮ್ಮಿಕೊಂಡಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರ್ವಜನಿಕರು ಸರ್ಕಾರಿ ಸೌಲಭ್ಯ ಪಡೆಯಲು ಮತ್ತು ಇತರೆ ಕೆಲಸಗಳಿಗೆ ಕಚೇರಿಗಳಿಗೆ ಬಂದಾಗ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಕೆಲಸ ಮಾಡುವುದಕ್ಕೆ ಸರ್ಕಾರ ಸಂಬಳ ನೀಡುತ್ತಿದೆ. ನಿಷ್ಠೆಯಿಂದ ಕರ್ತವ್ಯ ನಿಭಾಯಿಸಿ ಎಂದರು. ತಾಲೂಕು ವೈದ್ಯಾಧಿಕಾರಿ ಡಾ. ವಿಶ್ವನಾಥ್ ಮಾತನಾಡಿ, ಆರೋಗ್ಯ ಇಲಾಖೆಯಿಂದ 100 ದಿನದ ಕ್ಷಯ ರೋಗ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಾವಿರ ಜನರಿಗೆ ರೋಗ ಪರೀಕ್ಷೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖಾಧಿಕಾರಿ ಪ್ರಭು ಶಂಕರ್ ಮಾತನಾಡಿ, ಹನಿ ನೀರಾವರಿ ಯೋಜನೆಯಡಿ ಶೇ.90 ರಷ್ಟು ಸಹಾಯಧನದಲ್ಲಿ ಸ್ಪ್ರಿಂಕ್ಲರ್ ಸೆಟ್ ವಿತರಿಸಲಾಗುವುದು. 2000 ತರಕಾರಿ ಕಿಟ್ ವಿತರಣೆ ಮಾಡಲಾಗಿದೆ. 87,500 ರೂ. ವೆಚ್ಚದ ಈರುಳ್ಳಿ ಶೇಖರಣಾ ಘಟಕ ನಿರ್ಮಿಸಿಕೊಳ್ಳುವ ಅವಕಾಶವಿದೆ. 103 ಮಂದಿ ರೈತರಿಗೆ ಈ ಸೌಲಭ್ಯ ತಲುಪಿಸುವ ಗುರಿ ಇದೆ ಎಂದರು. ಲೋಕಾಯುಕ್ತ ಡಿವೈಎಸ್ಪಿ ಕೆ. ಕಲಾವತಿ, ಪಿಎಸ್‌ಗಳಾದ ಸಿ. ಮಧುಸೂದನ್, ಪ್ರಭು.ಬ. ಸೂರಿನ, ಪಿ. ಸರಳಾ, ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ತಾಪಂ ಇಒ ಕೆಂಚಪ್ಪ ಇದ್ದರು. (ಬಾಕ್ಸ್) ಎಇಇಗೆ ತರಾಟೆ ದೇವಿಕೆರೆ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡ ಕಾಮಗಾರಿ ಕಳೆದೊಂದು ವರ್ಷದಿಂದ ನನೆಗುದಿಗೆ ಬಿದ್ದಿದೆ. ಬೀದಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ರಣದಮ್ಮ ಚಂದ್ರಪ್ಪ, ಸದಸ್ಯ ಗುರುಸ್ವಾಮಿ ದೂರು ನೀಡಿದ್ದರು. ದೂರು ಪರಿಶೀಲಿಸಿದ ಎಸ್ಪಿ ಗ್ರಾಪಂ ಅಧ್ಯಕ್ಷರೇ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದು ಬೇಸರದ ಸಂಗತಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳು ತಾಲೂಕಿನ ಕಾಮಗಾರಿಗಳ ಬಗ್ಗೆ ಗಮನ ಹರಿಸಬೇಕು. ವರ್ಷ ಕಳೆದರೂ ಕೆಲಸ ಮುಗಿದಿಲ್ಲ. ಮನೆಗಳಿಗೆ ನೀರು ಪೂರೈಕೆ ಮಾಡುತ್ತಿಲ್ಲ ಇದಕ್ಕೆ ಯಾರು ಹೊಣೆ, ಗುತ್ತಿಗೆದಾರನ ತಪ್ಪಾ ಅಥವಾ ಸರ್ಕಾರದ್ದಾ? ಎಂದು ತರಾಟೆಗೆ ತೆಗೆದುಕೊಂಡರು. ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ವಿಳಂಬ ಮಾಡಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.