ದಾವಣಗೆರೆ : ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ 4ನೇ ರಾಜ್ಯ ಅಧಿವೇಶನ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಜೂ. 7 ಮತ್ತು 8 ರಂದು ನಡೆಯಲಿದೆ ಎಂದು ಪರಿಷದ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಧಿವೇಶನಕ್ಕೆ 3 ರಿಂದ 4 ಸಾವಿರ ಪ್ರತಿನಿಧಿಗಳು ಬರುವ ನಿರೀಕ್ಷೆ ಇದೆ. ಸಾಹಿತ್ಯದಲ್ಲಿ ‘ಸ್ವ’ತ್ವ ವಿಷಯದ ಕುರಿತು ಚರ್ಚೆ, ಸಂವಾದ, ಕವಿಗೋಷ್ಠಿ, ಹರಟೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಬಾಗಲಕೋಟೆಯ ಸಾಹಿತ್ಯ ಸಾಧಕ ಎಸ್.ಜಿ. ಕೋಟಿ ಅವರು ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೂ. 7 ರಂದು ಬೆಳಗ್ಗೆ 10 ಗಂಟೆಗೆ ಸಾಹಿತಿ, ಅಂಕಣಕಾರ ಪ್ರೊ. ಪ್ರೇಮಶೇಖರ ಅಧಿವೇಶನ ಉದ್ಘಾಟಿಸಲಿದ್ದಾರೆ. ಭಾಷಾ ವಿಜ್ಞಾನಿ, ಸಂಶೋಧಕ ಡಾ. ಸಂಗಮೇಶ ಸವದತ್ತಿಮಠ ಪುಸ್ತಕ ಬಿಡುಗಡೆ ಮಾಡುವರು. ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ನಾ. ಮೊಗಸಾಲೆ ಕಾಂತಾವರ ಉಪಸ್ಥಿತರಿರುವರು. ಅಂದು ಮಧ್ಯಾಹ್ನ 2.30ಕ್ಕೆ ಸಾಹಿತ್ಯದಲ್ಲಿ ‘ಸ್ವ’ತ್ವ ಅಭಿವ್ಯಕ್ತಿ ಕುರಿತು ಚರ್ಚಾ ಗೋಷ್ಠಿ ನಡೆಯಲಿದೆ. ಪತ್ರಕರ್ತ ಎಸ್. ಸೂರ್ಯಪ್ರಕಾಶ ಪಂಡಿತ್, ವಿಮರ್ಶಕ ಡಾ. ಅಜಕ್ಕಳ ಗಿರೀಶ ಭಟ್, ಸಾಹಿತಿಗಳಾದ ಸಹನಾ ವಿಜಯಕುಮಾರ್, ದೀಪಾ ಜೋಶಿ, ವಿಮರ್ಶಕರಾದ ಬೇಳೂರು ಸುದರ್ಶನ, ನೀತಾ ರಾವ್ ಭಾಗವಹಿಸುವರು. ಸಾಹಿತಿ ರೋಹಿತ್ ಚಕ್ರತೀರ್ಥ ಸಮನ್ವಯಕಾರರಾಗಿ ಪಾಲ್ಗೊಳ್ಳಲಿದ್ದಾರೆ. ಸಂಜೆ 6 ಗಂಟೆಗೆ ನಮ್ಮ ಕಟ್ಟೆ-ನಮ್ಮ ಮಾತು ನಡೆಯಲಿದ್ದು, ಸಂಸ್ಕೃತಿ ಚಿಂತಕಿ ಡಾ.ವಿ.ಬಿ. ಆರತಿ, ಹಾಸ್ಯ ವಾಗ್ಮಿಗಳಾದ ವೈ.ಎನ್. ಗುಂಡೂರಾವ್, ಗಂಗಾವತಿ ಪ್ರಾಣೇಶ್, ಎಂ.ಎಸ್. ನರಸಿಂಹಮೂರ್ತಿ ಭಾಗವಹಿಸುವರು. ಯುವಾ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಸಮನ್ವಯಕಾರರಾಗಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 7.30ಕ್ಕೆ ಪ್ರತಿಭಾ ಅಭಿವ್ಯಕ್ತಿಯಲ್ಲಿ ತುಮಕೂರಿನ ಆರ್ಯ ಭಟ್, ಯಲ್ಲಾಪುರದ ಆದ್ಯಾ ಹೆಗಡೆ, ಮಂಗಳೂರಿನ ಸುಮಂಗಲಾ ರತ್ನಾಕರ್ ಭಾಗವಹಿಸುವರು ಎಂದು ಮಾಹಿತಿ ನೀಡಿದರು. ಜೂ. 8 ರಂದು ಬೆಳಗ್ಗೆ 10 ಗಂಟೆಗೆ ಕಾವ್ಯಗೋಷ್ಠಿ ನಡೆಯಲಿದ್ದು ಧಾರವಾಡದ ಕವಿ ದಿವಾಕರ ಹೆಗಡೆ ಕೆರೆಹೊಂಡ ಅವಲೋಕನ ಮಾಡಲಿದ್ದಾರೆ. ನಾಡಿನ ವಿವಿಧ ಜಿಲ್ಲೆಗಳ ಕವಿಗಳು ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಸಾಹಿತಿ ಡಾ. ಜಿ.ಬಿ. ಹರೀಶ ಸಮಾರೋಪ ಮಾತುಗಳನ್ನು ಆಡಲಿದ್ದಾರೆ. ಪರಿಷತ್ತಿನ ರಾಷ್ಟ್ರೀಯ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಪವನಪುತ್ರ ಬಾದಲ್ ಉಪಸ್ಥಿತರಿರುವರು ಎಂದು ತಿಳಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಅಧಿವೇಶನ 3 ವರ್ಷಗಳಿಗೆ ಒಮ್ಮೆ ನಡೆಯುತ್ತದೆ. ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ಸ್ವಾಗತ ಸಮಿತಿಯನ್ನೂ ರಚಿಸಲಾಗಿದೆ ಎಂದು ಹೇಳಿದರು. ಅಧಿವೇಶನದ ಸಂಚಾಲಕ ಗು. ರುದ್ರಯ್ಯ, ಸಹ ಸಂಚಾಲಕ ಅರುಣ್ ಗುಡ್ಡದಕೇರಿ, ಶಿವಮೊಗ್ಗ ವಿಭಾಗೀಯ ಸಂಚಾಲಕ ಶ್ರೀಹರ್ಷ, ಜಿಲ್ಲಾಧ್ಯಕ್ಷ ಲಲಿತ್ ಕುಮಾರ್ ಜೈನ್, ಜಿಲ್ಲಾ ಸಂಚಾಲಕ ಅಮರೇಶ್, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ಕೋಲ್ಕುಂಟೆ, ಸದಸ್ಯ ರಾಕೇಶ್ ಸುದ್ದಿಗೋಷ್ಠಿಯಲ್ಲಿದ್ದರು.