ದಾವಣಗೆರೆ : ಜಗಳೂರಿನಲ್ಲಿ ಜ. 11 ಮತ್ತು 12 ರಂದು ನಡೆಯಲಿರುವ ದಾವಣಗೆರೆ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಶ್ರಾಂತ ಕನ್ನಡ ಅಧ್ಯಾಪಕ, ಲೇಖಕ, ವಾಗ್ಮಿ ಹಾಗೂ ಸಾಂಸ್ಕೃತಿಕ ಚಿಂತಕ ಪ್ರೊ.ಎ.ಬಿ. ರಾಮಚಂದ್ರಪ್ಪ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದ್ದಾರೆ. ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಭಾಗವಹಿಸಿದ ಬಹುತೇಕ ಕಾರ್ಯಕಾರಿ ಸಮಿತಿ ಸದಸ್ಯರು ಎ.ಬಿ. ರಾಮಚಂದ್ರಪ್ಪ ಅವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲು ಒಲವು ತೋರಿದ್ದರಿಂದ ಆಯ್ಕೆ ಸುಗಮವಾಯಿತು ಎಂದು ಮಾಹಿತಿ ನೀಡಿದ್ದಾರೆ. ವೈಚಾರಿಕ ಹಾಗೂ ಸಾಂಸ್ಕೃತಿಕ ಚಿಂತಕ, ಜನಪರ ಹೋರಾಟಗಾರ ಪ್ರೊ.ಎ.ಬಿ.ರಾಮಚಂದ್ರಪ್ಪ 3 ದಶಕಗಳಿಗೂ ಹೆಚ್ಚಿನ ಕಾಲ ಪದವಿ ಕಾಲೇಜು ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ‘ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯದಲ್ಲಿ ಅಂಬೇಡ್ಕರ್ ಚಿಂತನೆಗಳು’ ವಿಷಯದಲ್ಲಿ ಸಂಶೋಧನಾ ಮಹಾಪ್ರಬಂಧ ಮಂಡನೆ ಮಾಡಿ ಪಿಎಚ್.ಡಿ ಪದವಿ ಹೊಂದಿದ್ದಾರೆ. ಈವರೆಗೆ ಅವರ 19 ಕೃತಿಗಳು ಪ್ರಕಟಗೊಂಡಿವೆ. ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಚುನಾಯಿತರಾದ ಹಾಗೂ ಜಿಲ್ಲಾ ಕಸಾಪ ಪದ ನಿಮಿತ್ತ ಸದಸ್ಯ ವೀರೇಶ್ ಎಸ್. ಒಡೇನಪುರ ಆವರನ್ನು ಜಿಲ್ಲಾ ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ, ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಗೌರವ ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ, ಸಂಘಟನಾ ಕಾರ್ಯದರ್ಶಿಗಳಾದ ಸಿ.ಜಿ. ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ದಾವಣಗೆರೆ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಜಗಳೂರು ತಾಲೂಕು ಅಧ್ಯಕ್ಷೆ ಕೆ.ಸುಜಾತಮ್ಮ, ಹರಿಹರ ತಾಲೂಕು ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಚನ್ನಗಿರಿ ತಾಲೂಕು ಅಧ್ಯಕ್ಷ ಎಲ್.ಜಿ.ಮಧುಕುಮಾರ್, ಹೊನ್ನಾಳಿ ತಾಲೂಕು ಅಧ್ಯಕ್ಷ ಜಿ.ಮುರಿಗೆಪ್ಪಗೌಡ, ನ್ಯಾಮತಿ ತಾಲೂಕು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಇದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಂ. ಸುರೇಶ್, ಪ್ರಸಾದ ಬಂಗೇರ, ಎಸ್.ಎಂ. ಮಲ್ಲಮ್ಮ, ಬಿ.ಎಂ. ಭೈರವೇಶ್ವರ, ಸಿ.ಕೆ. ರುದ್ರಾಕ್ಷಿ ಬಾಯಿ, ಎಚ್.ಕೆ. ಸತ್ಯಭಾಮಾ ಮಂಜುನಾಥ್, ಎ.ರಿಯಾಜ್ ಅಹಮದ್, ಎಂ.ಎ.ಸುದರ್ಶನ್, ಕೆ.ಪಿ. ಮರಿಯಾಚಾರ್ ಇದ್ದರು.