ದಾವಣಗೆರೆ : ಕಾವೇರಿ ನೀರಿನ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಭಾನುವಾರ ಪ್ರಧಾನಮಂತ್ರಿಗೆ ರಕ್ತದಲ್ಲಿ ಪತ್ರ ಬರೆದು ಚಳವಳಿ ನಡೆಸಿದರು.
ನಗರದ ಪಿ.ಜೆ.ಬಡಾವಣೆಯ ಶಿವ ಹೈಟೆಕ್ ಲ್ಯಾಬ್‌ನಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಚಳವಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಮೇಗೌಡ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ಈಗಾಗಲೇ ಹಲವಾರು ಹೋರಾಟ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾದ ಗಮನ ಸೆಳೆದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ತೀರದ ರೈತರಿಗೆ ಅನ್ಯಾಯವೆಸಗಿದ್ದಾರೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿಯವರು ತಕ್ಷಣ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ ರಾಜ್ಯದ ಮುಖ್ಯಮಂತ್ರಿಗಳ ತುರ್ತು ಸಭೆ ಕರೆದು ಕರ್ನಾಟಕಕ್ಕೆ ಆದ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಉತ್ತರ ಉತ್ತರ ನೀಡಲಿದ್ದಾರೆ ಎಂದರು.
ರಾಜ್ಯದ 28 ಸಂಸದರು ಪ್ರಧಾನಿ ಬಳಿ ನಿಯೋಗ ಹೋಗಿ ಕರ್ನಾಟಕದ ಸ್ಥಿತಿಗತಿ ಹಾಗೂ ನೀರಿನ ಪ್ರಮಾಣದ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಂಸದರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕರವೇ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜಬಿವುಲ್ಲಾ, ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಲೋಕೇಶ್, ಯುವ ಘಟಕ ಅಧ್ಯಕ್ಷ ಗೋಪಾಲ್ ದೇವರಮನೆ, ಶಿವಕುಮಾರ್, ರವಿಕುಮಾರ್, ಈಶ್ವರ್, ಮಹೇಶ್ವರಪ್ಪ , ಎಂಡಿ ರಫೀಕ್. ಖಾದರ್ ಬಾಷಾ, ಆಟೋ ರಫಿಕ್ ಇತರರು ಚಳವಳಿಯಲ್ಲಿ ಭಾಗವಹಿಸಿದ್ದರು.