ದಾವಣಗೆರೆ : ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಒಂದು ಜೀವಂತ ಚಲನಶೀಲ ದಾಖಲೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಬಣ್ಣಿಸಿದರು.
ನಗರದ ಜಿಲ್ಲಾ ವಕೀಲರ ಸಂಘದಲ್ಲಿ ಅಂಬೇಡ್ಕರ್ ಅವರ 133ನೇ ಜಯಂತಿ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ 8ನೇ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅಪಾರ ವಿದ್ವತ್ತು ಗಳಿಸಿ, ಅನೇಕ ಹುದ್ದೆಗಳನ್ನು ನಿರ್ವಹಿಸಿ, ರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಒಂದು ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟಿದ್ದಾರೆ. ಮುಂದಿನ ಒಂದು ಶತಮಾನಕ್ಕೆ ಆಗುವಷ್ಟು ಆಲೋಚನೆ ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದರು.
ಬದುಕಿನಲ್ಲಿ ಅನುಭವಿಸಿದ ಸಂಕಷ್ಟಗಳನ್ನೇ ಅವಕಾಶಗಳನ್ನಾಗಿ ಮಾಡಿಕೊಂಡು, ಮಹಾ ಮಾನವತಾವಾದಿಯಾಗಿ ಬೆಳೆದ ಅಂಬೇಡ್ಕರ್ ಜಗತ್ತಿನ ಸರ್ವಕಾಲಿಕ ಹತ್ತು ಸರ್ವಶ್ರೇಷ್ಠರಲ್ಲಿ ಒಬ್ಬರು ಎಂದು ಹೇಳಿದರು.
ಅಂಧಶ್ರದ್ಧೆಗಳಿಂದ ದೂರವಾಗಿ, ಆಲೋಚನಾ ದಾಟಿಯನ್ನು ಬದಲಾಯಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾಧ್ಯ ಎಂದು ಅಂಬೇಡ್ಕರ್ ದೃಢವಾಗಿ ನಂಬಿದ್ದರು ಎಂದರು.
ನಿಷ್ಪಕ್ಷಪಾತ ನಿಲುವು, ಯಾರ ಬಗ್ಗೆಯೂ ಅಸೂಯೆಪಡದ, ನ್ಯಾಯ ಮತ್ತು ಸಮಾನತೆಗಾಗಿ ತಮ್ಮ ಜೀವನ ಸವೆಸಿದ ಅಂಬೇಡ್ಕರ್‌ರವರ ಬದುಕು ಮತ್ತು ಸಾಧನೆಯ ಪ್ರಸ್ತುತತೆ ವಿವರಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್ ಮಾತನಾಡಿ, ಇಂದಿನ ಯುವಕರಿಗೆ ಸಂವಿಧಾನದ ಪ್ರಸ್ತುತತೆ ತಿಳಿಸುವುದು ಅತ್ಯಗತ್ಯವಾಗಿದೆ. ಸಂವಿಧಾನ ರಕ್ಷಿಸುವ ಜವಾಬ್ದಾರಿ ವಕೀಲ ವೃಂದದ ಮೇಲಿದೆ ಎಂದರು.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ವಿ. ವಿಜಯಾನಂದ, ಹಿರಿಯ ವಕೀಲ ಬಿ.ಎಂ. ಹನುಮಂತಪ್ಪ ಮಾತನಾಡಿದರು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ದಾವಣಗೆರೆ ವಲಯದ ಹಿರಿಯ ಕಾನೂನು ಅಧಿಕಾರಿ ಎ.ಎಂ. ಬಸವರಾಜ, ಸರ್ಕಾರಿ ಅಭಿಯೋಜಕ ಬಿ.ಮಂಜುನಾಥ, ಜಿಲ್ಲಾ ಸರ್ಕಾರಿ ವಕೀಲ ಎಸ್. ಪ್ರಕಾಶ್ ಇದ್ದರು.
ಹೆಗ್ಗೆರೆ ರಂಗಪ್ಪ ವಚನ ಗೀತೆ ಹಾಗೂ ಅಂಬೇಡ್ಕರ್ ಕುರಿತ ಗೀತೆ ಹಾಡಿದರು. ವಕೀಲ ಗುಮ್ಮನೂರು ಮಲ್ಲಿಕಾರ್ಜುನ ಅಂಬೇಡ್ಕರ್ ಕುರಿತ ಸ್ವ-ರಚಿತ ಎರಡು ಕಿರುಕವನ ವಾಚಿಸಿದರು.
ವಕೀಲರ ಸಂಘದಿಂದ ವಿಶ್ರಾಂತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ, ಕಾನೂನು ಅಧಿಕಾರಿ ಎ.ಎಂ. ಬಸವರಾಜ, ಸರ್ಕಾರಿ ಅಭಿಯೋಜಕ ಬಿ. ಮಂಜುನಾಥ, ಜಿಲ್ಲಾ ಸರ್ಕಾರಿ ವಕೀಲ ಎಸ್. ಪ್ರಕಾಶ್ ಹಾಗೂ ವಕೀಲ ಕೆ.ಎಚ್. ಹನುಮಂತಪ್ಪ ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ ವಂದಿಸಿದರು. ಸಂಘದ ಕಾರ್ಯದರ್ಶಿ ಎಸ್. ಬಸವರಾಜ್ ನಿರೂಪಿಸಿದರು.