ದಾವಣಗೆರೆ : ಮಹಿಳೆಯರು ತಮ್ಮ ಸುರಕ್ಷತೆಗಾಗಿ ಇರುವ ಹಲವು ಕಾನೂನುಗಳ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ, ಮಹಿಳೆಯರಿಗೆ ಕಾನೂನು ಅರಿವು ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಶಕಗಳ ಹಿಂದಿನ ಸಮಾಜದಲ್ಲಿ ಪ್ರತಿ ಹಂತದಲ್ಲೂ ಮಹಿಳೆಯರ ಮೇಲೆ ಶೋಷಣೆ, ದೌರ್ಜನ್ಯ ನಡೆಯುತ್ತಿತ್ತು. ಇದನ್ನು ಗಮನಿಸಿ ಅವರ ಸುರಕ್ಷತೆಗೆಂದೇ ವರದಕ್ಷಿಣೆ ನಿಷೇಧ, ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಮುಂತಾದ ಕಾಯ್ದೆಗಳನ್ನು ಜಾರಿಗೊಳಿಸಲಾಯಿತು. ಪರಿಣಾಮವಾಗಿ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ, ಆದರೆ ನಿಂತಿಲ್ಲ. ಆದ್ದರಿಂದ ಮಹಿಳೆಯರು ರಾಷ್ಟ, ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದ ಕಾನೂನು ಸೇವಾ ಪ್ರಾಧಿಕಾರಗಳ ನೆರವಿನೊಂದಿಗೆ ನ್ಯಾಯ ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಪ್ರತಿಯೊಬ್ಬರೂ ಇತರರನ್ನು ಗೌರವಿಸಬೇಕು. ಸ್ವಾತಂತ್ರ್ಯ ಇದೆ ಎಂದು ಸ್ವೇಚ್ಛೆಯಿಂದ ವರ್ತಿಸಬಾರದು. ನೀವು ಮಾಡುವ ಕೆಲಸದಿಂದ ಬೇರೆಯವರಿಗೆ ತೊಂದರೆ ಆದರೆ ಆ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆಯಾದಂತೆ. ಕಾನೂನುಗಳೇ ಇಲ್ಲದಿದ್ದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತ ಬಂದಿರುವ ಮಹಿಳೆಯರ ಸುರಕ್ಷತೆಗಾಗಿ ಹಲವಾರು ಕಾನೂನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಒಟ್ಟು ಜನಸಂಖ್ಯೆಯಲ್ಲಿ ಶೇ. 50ಕ್ಕೂ ಹೆಚ್ಚು ಮಹಿಳೆಯರೇ ಇದ್ದೇವೆ. ಈ ಪೈಕಿ ಶೇ. 70ರಷ್ಟು ಮಂದಿ ಗ್ರಾಮೀಣ ಭಾಗಗಳಲ್ಲಿ ವಾಸವಿದ್ದಾರೆ. ಹೆಚ್ಚು ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣದ ಜತೆಗೆ ಕಾನೂನು ಅರಿವು ಕೂಡ ಇರಬೇಕು ಎಂದು ಸಲಹೆ ನೀಡಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಎಸ್.ಎ. ಜಿಗಳಿ ಹಾಲೇಶ್ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ನ್ಯಾಯಾಧೀಶ ಮಹಾವೀರ ಕರೆಣ್ಣವರ್, ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ನಾಗರಾಜ್, ದಸಂಸ ರಾಜ್ಯ ಸಂಚಾಲಕ ಎಚ್. ಮಲ್ಲೇಶ್ ಇದ್ದರು.
...
(ಕೋಟ್)
ಶ್ರೇಣೀಕೃತ ಸಮಾಜದಲ್ಲಿ ಮಹಿಳೆ ಮತ್ತು ದಲಿತರು ಒಂದಿಲ್ಲ ಒಂದು ರೀತಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಸ್ವಾತಂತ್ರ್ಯಾ ನಂತರ ಎಲ್ಲರಿಗೂ ಸಮಪಾಲು-ಸಮಬಾಳು ನೀಡುವ ಉದ್ದೇಶದಿಂದ ಹಲವಾರು ಕಾನೂನು ಜಾರಿಗೊಳಿಸಲಾಗಿದೆ. ಮಹಿಳೆಯರು ಕಾನೂನು ಅರಿವು ಪಡೆದು ಅನ್ಯಾಯಗಳ ವಿರುದ್ಧ ಧ್ವನಿಯೆತ್ತಬೇಕು.
ಡಾ.ಎಂ.ವಿ. ವೆಂಕಟೇಶ್, ಜಿಲ್ಲಾಧಿಕಾರಿ.
...