ಜಿಲ್ಲೆ

ಪ್ರಥಮ ಚಿಕಿತ್ಸೆ ಅರಿವಿದ್ದರೆ ಅಪಾಯ ದೂರ

ರಮೇಶ ಜಹಗೀರದಾರ್

ದಾವಣಗೆರೆ  : ಪ್ರಥಮ ಚಿಕಿತ್ಸೆ ಕುರಿತಂತೆ ಸಾರ್ವಜನಿಕರಲ್ಲಿ ಹಲವು ತಪ್ಪು ಕಲ್ಪನೆಗಳಿವೆ. ಗಾಯಾಳುವಿಗೆ ನೀರು ಕುಡಿಸುವುದು, ಕೈಕಾಲು ಉಜ್ಜುವುದು ಪ್ರಥಮ ಚಿಕಿತ್ಸೆ ಅಲ್ಲ ಎಂದು ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣೆ ಕುರಿತ ರಾಷ್ಟ್ರೀಯ ತರಬೇತುದಾರ ಡಾ.ವಿ.ಎಲ್.ಎಸ್. ಕುಮಾರ್ ಹೇಳಿದರು.  ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಭಾಂಗಣದಲ್ಲಿ ಗುರುವಾರ, ಕೆಎಸ್‌ಆರ್‌ಟಿಸಿ ಮತ್ತು ಭಾರತೀಯ ರೆಡ್‌ಕ್ರಾಸ್ ಹಮ್ಮಿಕೊಂಡಿದ್ದ ಪ್ರಥಮ ಚಿಕಿತ್ಸೆ ಕುರಿತು ಜಾಗೃತಿ ಕಾರ್ಯಾಗಾರದಲ್ಲಿ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿ ಉದ್ದೇಶಿಸಿ ಮಾತನಾಡಿದರು.  ಅಪಘಾತದಿಂದ ಗಾಯಗೊಂಡು ಇಲ್ಲವೇ ಯಾವುದೇ ತುರ್ತು ಪರಿಸ್ಥಿತಿಗೆ ಸಿಲುಕಿದ ವ್ಯಕ್ತಿಗೆ ನೀರು ಕುಡಿಸುವುದೇ ಪ್ರಥಮ ಚಿಕಿತ್ಸೆಯಲ್ಲ. ಹೀಗೆ ನೀರು ಕುಡಿಸುವುದು ಗಾಯಾಳುವಿನ ಅಥವಾ ಸಂತ್ರಸ್ತರ ಪ್ರಾಣಕ್ಕೆ ಮುಳುವಾಗಬಹುದು ಎಂದು ತಿಳಿಸಿದರು.  ಯಾವುದೇ ದುರ್ಘಟನೆ ನಡೆದ ಮೊದಲ 10 ನಿಮಿಷವು ಗಾಯಾಳು ಪಾಲಿನ ಪ್ರಮುಖ ಅವಧಿಯಾಗಿರುತ್ತದೆ. ಪ್ರಥಮ ಚಿಕಿತ್ಸೆ ವಿಷಯದಲ್ಲಿ ಈ ಅವಧಿಯನ್ನು ಪ್ಲಾಟಿನಂ ಟೈಮ್ ಎಂದು ಕರೆಯುತ್ತೇವೆ. ಅಪಘಾತವಾದಾಗ, ಹೃದಯಾಘಾತವಾದರೆ ಇಲ್ಲವೇ ಬೆಂಕಿ ಅವಘಡದಲ್ಲಿ ಹೊಗೆ ಕುಡಿದು ಅಸ್ವಸ್ಥರಾದವರು ಪ್ರಜ್ಞೆ ತಪ್ಪಿರುತ್ತಾರೆ. ಮೊದಲ 10 ನಿಮಿಷದವರೆಗೆ ಅವರ ಮಿದುಳು ಕ್ರಿಯಾಶೀಲವಾಗಿರುತ್ತದೆ. ಅಷ್ಟರೊಳಗೆ ರೆಸ್ಪಿರೇಟರಿ ಪಲ್ಮನರಿ ರೆಸಸಿಟೇಷನ್ (ಸಿಪಿಆರ್) ಪ್ರಕ್ರಿಯೆ ನಡೆಸಿದರೆ, ಗಾಯಾಳು ಬದುಕುಳಿಯುವ ಸಾಧ್ಯತೆ ಶೇ. 80ರಷ್ಟಿರುತ್ತದೆ ಎಂದು ಹೇಳಿದರು.  ನಟ ಪುನೀತ್ ರಾಜಕುಮಾರ್ ಅವರಿಗೆ ಹೃದಯಾಘಾತವಾದಾಗ ಸುಮಾರು 25 ನಿಮಿಷಗಳ ಕಾಲ ಅವರನ್ನು ಖಾಸಗಿ ವಾಹನದಲ್ಲಿ ಕರೆದೊಯ್ಯಲಾಗಿದೆ. ಈ ಸಮಯದಲ್ಲಿ ಅವರೊಂದಿಗೆ ಇದ್ದವರಿಗೆ ಪ್ರಥಮ ಚಿಕಿತ್ಸೆಯ ಅರಿವಿದ್ದಿದ್ದರೆ, ಪುನೀತ್ ಕುಸಿದು ಬಿದ್ದ ಕೂಡಲೇ ಸಿಪಿಆರ್ ಮಾಡಿದ್ದರೆ ಅವರು ಇಂದು ನಮ್ಮೊಂದಿಗೆ ಇರುತ್ತಿದ್ದರು ಎಂದು ಡಾ.ಕುಮಾರ್ ತಿಳಿಸಿದರು.  ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ಹೆಚ್ಚಿದೆ. ಈ ನಿಟ್ಟಿನಲ್ಲಿ ಆರೋಗ್ಯದ ಕಡೆ ಗಮನ ಹರಿಸಬೇಕು. ಸಮಯಕ್ಕೆ ಸರಿಯಾಗಿ ಉತ್ತಮ, ಮಿತ ಆಹಾರ ಸೇವಿಸಬೇಕು. ನಿತ್ಯ ಕನಿಷ್ಠ 6ರಿಂದ 8 ಗಂಟೆ ಸುಖವಾದ ನಿದ್ರೆ ಮಾಡಬೇಕು. ನಿದ್ರೆಯೇ ಆರೋಗ್ಯದ ಮೂಲ ಮಂತ್ರ. ಕೆಲಸಕ್ಕೆ ಹೊರಡುವ ಮುನ್ನ ಒಂದು ನಿಮಿಷ ಧ್ಯಾನ ಮಾಡಬೇಕು. ಸಮಯ ಸಿಕ್ಕಾಗ ವ್ಯಾಯಾಮ ಮಾಡಬೇಕು ಎಂದು ಡಾ.ಕುಮಾರ್ ಸಾರಿಗೆ ಸಿಬ್ಬಂದಿಗೆ ಸಲಹೆ ನೀಡಿದರು.  ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಅಪಘಾತಗಳಿಂದಾಗಿ ದಿನಕ್ಕೊಂದು ಜೀವ ಹೋಗುತ್ತಿದೆ. ಈ ಪ್ರಮಾಣ ಕಡಿಮೆಯಾಗಬೇಕು. ಚಾಲಕ, ನಿರ್ವಾಹಕರಿಗೆ ಪ್ರಥಮ ಚಿಕಿತ್ಸೆ ಜ್ಞಾನವಿದ್ದರೆ ನೂರಾರು ಜೀವಗಳನ್ನು ಉಳಿಸಬಹುದು. ಪ್ರಥಮ ಚಿಕಿತ್ಸೆ ರಾಕೆಟ್ ಸೈನ್ಸ್ ಅಲ್ಲ, ಧೈರ್ಯ, ಸಮಯ ಪ್ರಜ್ಞೆ ಇದ್ದರೆ ಅಮಾಯಕರ ಪ್ರಾಣ ಉಳಿಸಬಹುದು ಎಂದು ಹೇಳಿದರು.  ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ, ಭಾರತೀಯ ರೆಡ್‌ಕ್ರಾಸ್ ಪ್ರಧಾನ ಕಾರ್ಯದರ್ಶಿ ಆನಂದಜ್ಯೋತಿ, ನಿರ್ದೇಶಕರಾದ ಶ್ರೀಕಾಂತ ಬಗರೆ, ಕುಮಾರ್, ಕರಿಬಸಪ್ಪ, ಸಂಯೋಜಕ ಎನ್.ಜಿ. ಶಿವಕುಮಾರ್, ಕೊಟ್ರೇಶ್ ಇದ್ದರು.