ದಾವಣಗೆರೆ: ಸಂಘಟನೆಯಲ್ಲಿ ಶಕ್ತಿಯಿದೆ. ಸಮಾಜದ ಅಭಿವೃದ್ಧಿಗಾಗಿ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಭೀಮಸೇನ ಹೇಳಿದರು. ಸವಿತಾ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ಚನ್ನಗಿರಿ ಕೇಶವಮೂರ್ತಿ ರೋಟರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 9ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಸಮಾಜದ ಜನರಲ್ಲಿ ಎಲ್ಲ ರೀತಿಯ ಸಾಮರ್ಥ್ಯವಿದೆ. ಕಲೆ, ಕ್ರೀಡೆ, ಉದ್ಯಮ, ವೈದ್ಯಕೀಯ, ಸಾಹಿತ್ಯ, ರಂಗಭೂಮಿ, ಸಂಗೀತ, ಶಿಲ್ಪಕಲೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತರಿದ್ದಾರೆ. ಅದನ್ನು ಬಳಸಿಕೊಂಡು ಇನ್ನಷ್ಟು ಎತ್ತರಕ್ಕೆ ಬೆಳೆಯುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ರಾಜಕಾರಣ ನಮಗೆ ಹೊಂದುವುದಿಲ್ಲ. ಕಾಯಕದಲ್ಲೇ ದೇವರನ್ನು ಕಾಣುವ ಸಮಾಜ ನಮ್ಮದು. ಮಾಡುವ ಕೆಲಸದಲ್ಲಿ ಅದ್ಭುತ ಏಕಾಗ್ರತೆ ನಮ್ಮವರಿಗಿದೆ. ಈ ಗರಿಮೆಯ ಜತೆಗೆ ಸಾಧ್ಯವಾದಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳೋಣ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಓದಿನ ಅಭ್ಯಾಸದ ಜತೆಗೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು, ಜನರೊಂದಿಗೆ ಬೆರೆಯಬೇಕು. ಇಷ್ಟಪಟ್ಟು ಓದಬೇಕು. ಆಗ ಮಾತ್ರ ಯಶಸ್ಸು ಪಡೆಯಲು ಸಾಧ್ಯವಿದೆ. ಯುವಕರು ವಿವಿಧ ಕ್ಷೇತ್ರಗಳಲ್ಲಿ ಬೆಳೆಯುವ ಮೂಲಕ ಸಮಾಜ ಗುರುತಿಸುವಂತಾಗಬೇಕು ಎಂದು ಸಲಹೆ ನೀಡಿದರು.
ನಮ್ಮ ಸಮಾಜದಲ್ಲಿ ಮಂಗಲವಾದ್ಯ ಕಲಾವಿದರಿದ್ದಾರೆ. ಕ್ಲಾರಿಯೊನೇಟ್ ವಾದನಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದವರಿದ್ದಾರೆ. ಸಮಾಜದ ಪರಂಪರೆ ಬಗ್ಗೆ ನಮಗೆ ಅಭಿಮಾನವಿರಬೇಕು ಎಂದು ಹೇಳಿದರು.
ದಾವಣಗೆರೆಯಲ್ಲಿ 1978ರಲ್ಲಿ ನಡೆದಿದ್ದ ಸವಿತಾ ಸಮಾಜದ ರಾಜ್ಯ ಮಟ್ಟದ ಸಮ್ಮೇಳನದ ನಂತರ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಯಿತು. ಅದಾದ ನಂತರ ಸಮಾಜದ ಸಂಘಟನೆಗೆ ಬಲ ಸಿಕ್ಕಿತು ಎಂದು ನೆನಪಿಸಿಕೊಂಡರು.
ಉಪನ್ಯಾಸಕ ಪಿ.ಬಿ.ವೆಂಕಟಾಚಲಪತಿ ಪ್ರಾಸ್ತಾವಿಕ ಮಾತನಾಡಿ, ಸವಿತಾ ಸಮಾಜ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ರಂಗಗಳಲ್ಲಿ ಹಿಂದುಳಿಯುವುದಕ್ಕೆ ಶಿಕ್ಷಣದ ಕೊರತೆ ಕಾರಣ. ಸುಶಿಕ್ಷಿತರಾದರೆ ಮಾತ್ರ ಸಮಾಜ ಮತ್ತು ವೈಯಕ್ತಿಕ ಬದುಕಿನಲ್ಲಿ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಸವಿತಾ ಸಮಾಜ ವೈಭವದ ಹಿನ್ನೆಲೆ ಹೊಂದಿದ್ದರೂ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಸಮಾಜದವರು ಸಂಘಟಿತರಾಗಿ ಸರ್ಕಾರದ ಸೌಲಭ್ಯ ಪಡೆಯಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಪಿ.ಜಿ.ನಾಗರಾಜ್, ಭದ್ರಾವತಿ ಆಕಾಶವಾಣಿ ಕಲಾವಿದ ಎನ್.ಕೆ.ಶ್ರೀನಿವಾಸ್, ವಕೀಲ ಎಸ್.ಪ್ರಕಾಶ್, ಜಿಲ್ಲಾ ಸವಿತಾ ಸಮಾಜ ಸಂಘದ ಅಧ್ಯಕ್ಷ ಬಾಲರಾಜ್ ಬಿ.ಉಪ್ಪಲ, ತಾಲೂಕು ಅಧ್ಯಕ್ಷ ಎನ್.ರಂಗಸ್ವಾಮಿ, ನಾರಾಯಣ ಶಹಪೂರ್, ರಾಜು, ನಾಗರಾಜ್ ಇದ್ದರು. ಐಶ್ವರ್ಯ ಪ್ರಾರ್ಥಿಸಿದರು. ಟಿ. ನಾರಾಯಣಪ್ಪ ಸ್ವಾಗತಿಸಿದರು. ಡಿ. ವೆಂಕಟೇಶ್ ವಂದಿಸಿದರು. ಜಯಪ್ರಕಾಶ್ ನಿರೂಪಿಸಿದರು.