ಜಿಲ್ಲೆ

ಹೋರಾಟಗಾರರನ್ನು ಜೈಲಿಗೆ ಕಳಿಸುವುದು ಅಪಮಾನ

ರಮೇಶ ಜಹಗೀರದಾರ್

ದಾವಣಗೆರೆ : ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣ ಗೌಡ, ನಾಡಿನ ಅಸ್ಮಿತೆಯ ಭಾಷೆಗೆ ಮಾನ್ಯತೆ ನೀಡುವ ಸಲುವಾಗಿ ಹೋರಾಟ ನಡೆಸಿದ್ದಾರೆ. ಅಂತಹವರನ್ನು ಜೈಲಿಗೆ ಕಳಿಸುವುದು ದೊಡ್ಡ ಅನ್ಯಾಯ ಎಂದು ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.
 ಹೋರಾಟಗಾರರ ಬಂಧನವನ್ನು ಖಂಡಿಸಿ ಜಿಲ್ಲಾ ಕರವೇ ವತಿಯಿಂದ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ನಿರಶನದಲ್ಲಿ ಭಾಗಿಯಾಗಿ ಮಾತನಾಡಿದರು.
 ಕನ್ನಡದಲ್ಲೂ ನಾಮಫಲಕ ಹಾಕಬೇಕೆಂದು ಸರ್ಕಾರ ಆದೇಶ ನೀಡಿದ್ದರೂ, ಕೆಲವು ಕನ್ನಡಿಗರು ಮಾಡಿರಲಿಲ್ಲ. ಸರ್ಕಾರ ಮಾಡಬೇಕಾದ ಕೆಲಸವನ್ನು ಕರವೇ ಮಾಡಿದೆ. ಇದಕ್ಕೆ ಪ್ರಶಂಸೆ ವ್ಯಕ್ತಪಡಿಸುವ ಬದಲು ಹೋರಾಟಗಾರರನ್ನು ಬಂಧಿಸುವುದು ಕನ್ನಡಕ್ಕೆ ಕುತ್ತು ತಂದಂತೆ. ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆಯು ನ್ಯಾಯ ಸಮ್ಮತವಾದ ಹೋರಾಟ ನಡೆಸುತ್ತ ಬಂದಿದೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಕರವೇ ಪರವಾಗಿ ನಿಂತಿದ್ದಾರೆ. ದಾವಣಗೆರೆ ಜಿಲ್ಲೆ, ತಾಲೂಕು, ಹೋಬಳಿ ಕೇಂದ್ರದಲ್ಲೂ ಹೋರಾಟಕ್ಕೆ ನಾವು ಸಾಕ್ಷಿಯಾಗುತ್ತೇವೆ ಎಂದು ತಿಳಿಸಿದರು.
 ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ್ ಕುರ್ಕಿ ಮಾತನಾಡಿ, ಕನ್ನಡದ ಭಾಷೆ ಪರವಾಗಿ ಮಾತನಾಡುವ ಜನರನ್ನು ಜೈಲಿಗೆ ಕಳಿಸುವುದಾದರೆ ಲೂಟಿ ಹೊಡೆಯುವವರನ್ನು ಎಲ್ಲಿಗೆ ಕಳಿಸಬೇಕು?. ನಮ್ಮ ರಾಜ್ಯದಲ್ಲೇ ಕನ್ನಡ ನಾಮಫಲಕ ಹಾಕಬೇಕೆಂದು ಹೋರಾಟ ಮಾಡುವ ದುಸ್ಥಿತಿ ಬಂದಿರುವುದು ದುರಂತ ಎಂದರು.
 ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ, ಗೋಪಾಲ ದೇವರಮನಿ, ತನ್ವೀರ್, ಬಾಷಾ, ಜಬಿವುಲ್ಲಾ ಪೈಲ್ವಾನ್, ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಮಂಜುಳಾ ಗಣೇಶ್, ಮಂಜುಳಾ ಮಾಂತೇಶ್ ಪಾಲ್ಗೊಂಡಿದ್ದರು.
 ಏಕತಾ ವೇದಿಕೆಯ ಅಧ್ಯಕ್ಷ ಹಾಲೇಶ್ ನಾಯಕ್, ಕಸಾಪ ಜಿಲ್ಲಾ ಕಾರ್ಯದರ್ಶಿ ದಿಳ್ಳೆಪ್ಪ, ಎ.ಸಿ. ರಾಘವೇಂದ್ರ, ಮಂಜುನಾಥ, ಜಿಲ್ಲಾ  ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ ಏಕಬೋಟೆ, ಎನ್.ಎಸ್. ರಾಜು ಇತರರು ಇದ್ದರು.