ಜಿಲ್ಲೆ

ಮಕ್ಕಳಲ್ಲಿ ಮೂಡಲಿ ಕನ್ನಡಾಭಿಮಾನ

ರಮೇಶ ಜಹಗೀರದಾರ್

ದಾವಣಗೆರೆ : ಇಂಗ್ಲಿಷ್ ವ್ಯಾಮೋಹ ತೊರೆಯಬೇಕು, ಕನ್ನಡದ ಬಗ್ಗೆ ಕೀಳರಿಮೆಯನ್ನು ಬಿಡಬೇಕು. ಮಕ್ಕಳಿಗೆ ನಮ್ಮ ಭಾಷೆಯ ಬಗ್ಗೆ ಅಭಿಮಾನ ಮೂಡಿಸಬೇಕು ಎಂದು ಸಾಹಿತಿ ಪ್ರೊ. ಎಸ್.ಬಿ. ರಂಗನಾಥ್ ಹೇಳಿದರು.
 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ‘ಕರ್ನಾಟಕ ಸಂಭ್ರಮ-50’ ರ ಅಂಗವಾಗಿ ನಗರದ ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಲರವ ಸಮಾರಂಭದಲ್ಲಿ ಮಾತನಾಡಿದರು.
 ಮಾತೃ ಭಾಷೆಯಲ್ಲಿ ಜ್ಞಾನಾರ್ಜನೆ ಸುಲಭ. ಇತರ ಭಾಷೆಯಲ್ಲಿ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಭಾಷೆಯ ಬಗ್ಗೆ ಅಭಿಮಾನವಿರಲಿ, ದುರಭಿಮಾನ ಬೇಡ ಎಂದರು.
 ಕಾವೇರಿ ನದಿ ನೀರಿನ ವಿವಾದ, ಗಡಿ ಭಾಗದ ಸಮಸ್ಯೆ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳ ದಬ್ಬಾಳಿಕೆ ಮುಂತಾದ ಸವಾಲುಗಳಿವೆ. ಅವುಗಳನ್ನು ಸಮರ್ಥವಾಗಿ ಎದುರಿಸಿ ಕನ್ನಡವನ್ನು ಉಳಿಸಿ ಬೆಳೆಸಬೇಕಿದೆ ಎಂದು ತಿಳಿಸಿದರು.
 ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಎಸ್.ಎಂ. ಗೌರಮ್ಮ ಉಪನ್ಯಾಸ ನೀಡಿ, ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ನಮ್ಮ ನಾಡಿನ ಸಾಹಿತ್ಯದ ಶ್ರೇಷ್ಠತೆಯನ್ನು ಬಿಂಬಿಸುತ್ತದೆ. ಇಂತಹ ಭಾಷೆಯನ್ನು ಕಲಿಯಲು, ಬಳಸಲು ನಮಗೆ ಯಾವುದೇ ಹಿಂಜರಿಕೆ ಇರಬಾರದು ಎಂದು ಹೇಳಿದರು.
 ಕನ್ನಡ ಆಡಳಿತ ಭಾಷೆಯಾಗಿದ್ದರೂ ಶಾಲೆಗಳಲ್ಲಿ ಅದರ ಕಲಿಕೆ ಕಡ್ಡಾಯವಾಗಿಲ್ಲದಿರುವುದು ದುರಂತ. ಕನ್ನಡವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಬೆಂಗಳೂರು, ಬೆಳಗಾವಿ, ಬಳ್ಳಾರಿ, ಕಾಸರಗೋಡು ನಮ್ಮದು ಎನ್ನುತ್ತಿದ್ದಾರೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಅನೇಕ ವಿದ್ವಾಂಸರು, ಸಾರಸ್ವತ ಲೋಕದ ದಿಗ್ಗಜರು, ಕಲಾವಿದರು ಕನ್ನಡ ಸಾಹಿತ್ಯ ಪರಿಷತ್ತಿಗೆ ಉಸಿರನ್ನು ತುಂಬಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ನಾಡು, ನುಡಿಗೆ ಶಕ್ತಿ ತುಂಬುವ ಕೆಲಸವನ್ನು 108 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬಂದಿದೆ. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಅನೇಕ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿದ್ದೇವೆ ಎಂದು ಹೇಳಿದರು.
 ರಾಜ್ಯ ಸರ್ಕಾರದ ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಟಿ. ಶಿವಶಂಕರ್, ಶಿವಂಗಿ ಶಣ್ಮರಿ ಹಾಗೂ ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘದ ಮುಖ್ಯಸ್ಥ ಡಾ.ಸಿ.ಆರ್. ನಸೀರ್ ಅಹಮದ್ ಅವರನ್ನು ಗೌರವಿಸಲಾಯಿತು. ಶಿವಂಗಿ ಶಣ್ಮರಿ ಪರವಾಗಿ ಅವರ ಮೊಮ್ಮಗಳು ಕುಮುದಾ ಸನ್ಮಾನ ಸ್ವೀಕರಿಸಿದರು.
 ಸಪ್ತಗಿರಿ ವಿದ್ಯಾಲಯದ ವ್ಯವಸ್ಥಾಪಕ ಟ್ರಸ್ಟಿ ಸಿ. ಶ್ರೀರಾಮಮೂರ್ತಿ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಬಿ. ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಸಿ.ಜಿ. ಜಗದೀಶ್ ಕೂಲಂಬಿ, ಕೆ. ರಾಘವೇಂದ್ರ ನಾಯರಿ, ರುದ್ರಾಕ್ಷಿ ಬಾಯಿ, ಮಲ್ಲಮ್ಮ ನಾಗರಾಜ್, ಸತ್ಯಭಾಮಾ ಇದ್ದರು.