ಜಿಲ್ಲೆ

ಕಾನೂನುಗಳ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್

ರಮೇಶ ಜಹಗೀರದಾರ್

ದಾವಣಗೆರೆ : ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಮಾಜಿಕ ಕಾನೂನುಗಳ ಹರಿಕಾರರಾಗಿದ್ದರು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.
 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ನಾಲ್ವಡಿ  ಕೃಷ್ಣರಾಜ ಒಡೆಯರ್ ಅವರ 140ನೇ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ಕೃಷ್ಣರಾಜ ಒಡೆಯರ್ ಅವರು ದೇವದಾಸಿ, ಬಸವಿ ಪದ್ಧತಿ, ವೇಶ್ಯಾ ವೃತ್ತಿ, ಗೆಜ್ಜೆ ಪೂಜೆ ಪದ್ಧತಿ ನಿರ್ಮೂಲನೆಗೆ ಕಾನೂನು ರೂಪಿಸಿದರು. ಹೊಸ ರೈಲು ಮಾರ್ಗಗಳನ್ನು ಆರಂಭಿಸಿದರು. ಮಹಿಳಾ ಮೀಸಲಾತಿ, ಪ್ರಾಥಮಿಕ ಉಚಿತ ಶಿಕ್ಷಣ ವ್ಯವಸ್ಥೆ ತಂದರು ಎಂದು ಸ್ಮರಿಸಿದರು.
 ರಾಜ್ಯದಲ್ಲಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಜನಸ್ನೇಹಿ ಆಡಳಿತ ನಡೆಸಿದ್ದರಿಂದ ಅವರ ಆಡಳಿತಾವಧಿಯನ್ನು ಸುವರ್ಣ ಯುಗವೆಂದು ಕರೆಯಬಹುದು ಎಂದು ಬಣ್ಣಿಸಿದರು.
 ನಾಲ್ವಡಿ ಅವರ ದೂರದರ್ಶಿತ್ವ ಚಿಂತನೆ ಫಲವಾಗಿ 1915ರಲ್ಲಿ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಇಂದು 109 ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿದೆ. ಕನ್ನಡ ನಾಡನ್ನು ಸಾಹಿತ್ಯಿಕ, ಸಾಂಸ್ಕೃತಿಕ, ಸಂಪದ್ಭರಿತವಾಗಿ ಬೆಳೆಸುವಲ್ಲಿ ಪರಿಷತ್ತಿನ ದೊಡ್ಡ ಪಾತ್ರ ವಹಿಸಿದೆ. ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
 ಕೆ. ರಾಘವೇಂದ್ರ ನಾಯರಿ, ಕೃಷ್ಣರಾಜ ಒಡೆಯರ್ ಅವರು ಕನ್ನಡ ನಾಡಿಗೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿ, ಕನ್ನಡ ನಾಡಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕೆಆರ್‌ಎಸ್ ಅಣೆಕಟ್ಟು, ವಾಣಿ ವಿಲಾಸ ಸಾಗರ, ಶಿವನಸಮುದ್ರ ಜಲ ವಿದ್ಯುತ್ ಯೋಜನೆ, ಮೈಸೂರು ಬ್ಯಾಂಕ್, ಮೈಸೂರು ವಿವಿ, ಬೆಂಗಳೂರು ವಿವಿ, ಮೈಸೂರು ಮೆಡಿಕಲ್ ಕಾಲೇಜು, ನಿಮ್ಹಾನ್ಸ್, ಮಿಂಟೋ ಆಸ್ಪತ್ರೆ ಸೇರಿ ಹಲವು ಶಾಶ್ವತ ಕೆಲಸಗಳನ್ನು ನೆರವೇರಿಸಿದ ಪ್ರಾತಃಸ್ಮರಣೀಯರು ಎಂದರು.
 ಒಡೆಯರ್ ಆಡಳಿತಾವಧಿಯಲ್ಲಿ ಇಡೀ ಭರತಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ಧಿಯನ್ನು ಮೈಸೂರು ರಾಜ್ಯ ಕಾಣುವ ಮೂಲಕ ದೇಶದಾದ್ಯಂತ ಹೆಸರು ಪಡೆದಿತ್ತು. ಶಿಕ್ಷಣ, ಆರೋಗ್ಯ, ನೀರಾವರಿ, ಕೃಷಿ, ಮೂಲಸೌಕರ್ಯ, ಕೈಗಾರಿಕೆ, ಆಡಳಿತ ಸುಧಾರಣೆ, ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿ ಸರ್ವತೋಮುಖ ಅಭಿವೃದ್ಧಿಯನ್ನು ಒಡೆಯರ್ ಮಾಡಿದ್ದರು ಎಂದು ತಿಳಿಸಿದರು.
 ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಅವರಗೆರೆ ಎಚ್.ಜಿ. ಉಮೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಕ್ಕರಗೊಳ್ಳ ಪರಮೇಶ್ವರಪ್ಪ, ಅವರಗೆರೆ ರುದ್ರಮುನಿ, ಕಸಾಪ ಜಿಲ್ಲಾ ಪದಾಧಿಕಾರಿಗಳಾದ ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಕೆ.ಎಸ್. ವೀರೇಶ್‌ಪ್ರಸಾದ್, ಸತ್ಯಭಾಮಾ ಮಂಜುನಾಥ್, ತಾಲೂಕು ಕಸಾಪ ಪದಾಧಿಕಾರಿಗಳಾದ ಬೇತೂರು ಷಡಾಕ್ಷರಪ್ಪ, ಕುರ್ಕಿ ಸಿದ್ದೇಶ್ ಇತರರು ಇದ್ದರು.
 ರುದ್ರಾಕ್ಷಿ ಬಾಯಿ ಪ್ರಾರ್ಥಿಸಿದರು, ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ ಸ್ವಾಗತಿಸಿದರು, ರೇವಣಸಿದ್ದಪ್ಪ ಅಂಗಡಿ ವಂದಿಸಿದರು.