ಜಿಲ್ಲೆ

ಜೀವಿಸುವ, ಶಿಕ್ಷಣ ಪಡೆಯುವ ಹಕ್ಕು ಸಮಾನ

ರಮೇಶ ಜಹಗೀರದಾರ್

ದಾವಣಗೆರೆ :  ಲಿಂಗ ಅಸಮಾನತೆ ಇಲ್ಲದೆ ಹೆಣ್ಣಿರಲಿ, ಗಂಡಿರಲಿ ಸಂವಿಧಾನಾತ್ಮಕವಾಗಿ ಜೀವಿಸುವ ಹಾಗೂ ಶಿಕ್ಷಣ ಪಡೆಯುವ ಹಕ್ಕು ಸಮಾನವಾಗಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಎಂ. ಕರೆಣ್ಣನವರ ತಿಳಿಸಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಲಲಿತಾ ಇಂಟರ್ ನ್ಯಾಷನಲ್ ಶಾಲೆ ಸಂಯುಕ್ತ ಆಶ್ರಯದಲ್ಲಿ ಬುಧವಾರ, ಪ್ರಸಕ್ತ ಸಾಲಿನ ಮಿಷನ್ ಶಕ್ತಿ ಯೋಜನೆಯ ‘ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆಯಡಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಹೆಣ್ಣು ಮಗುವಿನ ಪ್ರಾಮುಖ್ಯತೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.  ಹೆಣ್ಣು ಭ್ರೂಣ ಹತ್ಯೆ, ಗಂಡು ಮಗು ಬೇಕು ಎಂಬ ಕುಟುಂಬದವರ ಹಂಬಲ ಪರಿಸರಕ್ಕೆ ವಿರುದ್ಧವಾದ ಚಟುವಟಿಕೆಯಾಗಿದೆ ಎಂದು ತಿಳಿಸಿ, ಪೋಕ್ಸೋ ಕಾನೂನುಗಳ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡಿದರು.  ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಾನೂನುಗಳ ಕುರಿತು ಮಾಹಿತಿ ನೀಡಿದರು. ನಮ್ಮ ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳಿಗೆ ಉತ್ತಮ ಸ್ಥಾನಮಾನ ನೀಡಲಾಗಿದೆ. ಆದರೆ ಸುತ್ತಮುತ್ತಲಿನ ದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರಾಮುಖ್ಯತೆ ನೀಡಿಲ್ಲ. ಆದ್ದರಿಂದ ಆ ದೇಶಗಳು ಅಭಿವೃದ್ಧಿ ಹೊಂದಿಲ್ಲ ಎಂದರು.  ಜಿಲ್ಲಾ ವಕೀಲರ ಸಂಘದ ಮಹಿಳಾ ಪ್ರತಿನಿಧಿ ಭಾಗ್ಯಲಕ್ಷ್ಮೀ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿ, ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರವನ್ನು ಒದಗಿಸುತ್ತಿದ್ದಾರೆ. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಸ್ತನ್ಯಪಾನವನ್ನು ಮಾಡಿಸುವುದರ ಮೂಲಕ ಅವರ ಶಾರೀರಿಕ, ಬೌದ್ಧಿಕ ಬೆಳವಣಿಗೆಗೆ ಪೂರಕ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.  ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಎಸ್. ಅಭಿಕುಮಾರ್, ಪ್ರಾಚಾರ್ಯ ಕೆ.ವಿ. ಮಣಿಕಂಠನ್, ಲಲಿತಾ ಇಂಟರ್ ನ್ಯಾಷನಲ್ ಶಾಲೆಯ ಆಡಳಿತಾಧಿಕಾರಿ ಜಿ.ಪಿ. ಸುರೇಶ್, ವಿದ್ಯಾರ್ಥಿನಿಯರು ಹಾಜರಿದ್ದರು.